ಗಡಿಯಾರ-
ಕಾಲವನ್ನು ನಿಖರವಾಗಿ ಅಳೆದು ಸೂಚಿಸಲು ಬಳಸುವ ಯಾಂತ್ರಿಕ ರಚನೆ. ಎಲ್ಲ ಗಡಿಯಾರಗಳೂ ಕಿಸೆಗಡಿಯಾರಗಳೂ (ಪಾಕೆಟ್ ವಾಚಸ್) ಕೈಗಡಿಯಾರಗಳೂ (ರಿಸ್ಟ್ ವಾಚಸ್) ಪ್ರಧಾನವಾಗಿ ಕಾಲಸೂಚಕಯಂತ್ರಗಳು. ಇವು ಕಾರ್ಯನಡೆಸುವುದು ಸ್ಥಿರ ದರದಲ್ಲಿ ಪುನರಾವರ್ತಿಸುವ ಒಂದು ಯಾಂತ್ರಿಕ ಸಾಧನದ ನೆರವಿನಿಂದ. ಉದಾಹರಣೆಗೆ ನಾವು ಮನೆಯಲ್ಲಿ ಬಳಸುವ ತೂಗುಗಡಿಯಾರ. ಇದರಲ್ಲಿ ಆಂದೋಲಿಸುತ್ತಿರವ ಲೋಲಕ ಸ್ಥಿರದರದಲ್ಲಿ ಪುನರಾವರ್ತಿಸಿ ಕಾಲಗಣನೆಮಾಡುತ್ತದೆ. ಈ ಗಣನೆಯನ್ನು ಎಣಿಸಿ ದಿವಸದ ಯಾವುದೇ ಮುಹೂರ್ತದಲ್ಲಿ ಕಾಲ ಎಷ್ಟೆಂದು ಸೂಚಿಸಲು ಗಡಿಯಾರದ ಇತರ ಯಂತ್ರಭಾಗಗಳೂ ಮುಖಫಲಕವೂ ಮುಳ್ಳುಗಳೂ ಸಹಾಯಮಾಡುತ್ತವೆ. ಅಲ್ಲಿಗೆ ಕಾಲವೆಂಬ ಸ್ಥಿರದರದಿಂದ ಪ್ರವಹಿಸುವ ವಿದ್ಯಮಾನವನ್ನು ಅದೇ ದರದಿಂದ ಕಾರ್ಯವೆಸಗುವ ಒಂದು ಯಂತ್ರರಚನೆಗೆ ಲಗತ್ತಿಸಿ ಅದರ ನೆರವಿನಿಂದ ಕಾಲಗಣನೆ ಮಾಡುವುದೇ ಎಲ್ಲ ಗಡಿಯಾರಗಳ ಮೂಲತತ್ತ್ವ ಎಂದು ವೇದ್ಯವಾಗುತ್ತದೆ. ನಿಸರ್ಗದಲ್ಲಿ ಕಾಲಪ್ರವಾಹದ ಅರಿವು ನಮಗಾಗುವುದು ಸೂರ್ಯ ಚಂದ್ರ ನಕ್ಷತ್ರಗಳ ಉದಯಾಸ್ತಮಾನಗಳಿಂದ, ಹಗಲು ರಾತ್ರಿಗಳೆಂಬ ನಿರಂತರ ಬದಲಾವಣೆಗಳಿಂದ ಹಾಗೂ ಋತು ಭೇದಗಳಿಂದ. ಆದ್ದರಿಂದ ಯಾವ ಗಡಿಯಾರವೇ ಆಗಿರಲಿ ಅಂತಿಮವಾಗಿ ನಿಸರ್ಗದ ಕಾಲಸೂಚಕ ವಿದ್ಯಮಾನಗಳನ್ನು ಹೊಂದಿಕೊಂಡು ಇರಬೇಕಾದದ್ದು ಅಗತ್ಯ.

ನೈಸರ್ಗಿಕ ಸಾಧನಗಳು : ಪುರಾತನ ಕಾಲದಲ್ಲಿ ಮನುಷ್ಯ ಗುಹಾವಾಸಿಯಾಗಿದ್ದ ದಿನಗಳಂದು ಕಾಲದ ಎಣಿದೆ ಬಲು ಸರಳವಾಗಿತ್ತು. ಹಸಿವು, ಬಳಲಿಕೆ, ನಿದ್ರೆ ಮೊದಲಾದ ದೈಹಿಕ ಲಕ್ಷಣಗಳೂ ಹಗಲುರಾತ್ರಿಗಳೆಂಬ ನೈಸರ್ಗಿಕ ಬದಲಾವಣೆಗಳೂ ಅಂದಿನ ಕಾಲಸೂಚಕ ಘಟನೆಗಳಾಗಿದ್ದವು. ಬಹುಶಃ ಅತಿ ಪೂರ್ವ ಕಾಲದ ಮತ್ತು ಅತ್ಯಂತ ಸರಳವಾದ ಕಾಲಮಾಪಿಯೆಂದರೆ ಛಾಯಾ ಗಡಿಯಾರ (ಸನ್ ಡಯಲ್). ಈ ಉಪಕರಣದಲ್ಲಿ ಹಗಲಿನ ತಾಸುಗಳನ್ನು ಗುರುತಿಸಿರುವ ಮಟ್ಟವಾದ ಮೇಲ್ಮೈ ಮೇಲೆ ಅದರ ನೆರಳಿನ ಚಲನೆಯಿಂದ ಕಾಲವನ್ನು ತಿಳಿದುಕೊಳ್ಳಬಹುದು. ಪ್ರತಿಹಗಲೂ ಸುಮಾರು ಒಂದೇ ಕಾಲದಲ್ಲಿ ತನ್ನ ಗುಹೆಯ ಮುಂದಿರುವ ಮರಳಿನ ಮೇಲೆ ಮರದ ಕಾಂಡದ ನೆರಳು ಸರಿಯುತ್ತಿದ್ದುದನ್ನು ಬಹುಶಃ ಯಾವನೋ ಒಬ್ಬ ಅತಿ ಪುರಾತನ ಮನುಷ್ಯ ಗುರುತಿಸಬೇಕು. ತನ್ನ ನಿತ್ಯಕರ್ಮಗಳನ್ನು ಆಯಾ ಕಾಲಕ್ಕೆ ಸರಿಯಾಗಿ ಮಾಡಲು ಈ ನೆರಳಿನ ಸ್ಥಾನವನ್ನು ಅನುಸರಿಸಬಹುದೆಂದು ಅವನಿಗೆ ಹೊಳೆದಿರಬೇಕು. ಇದೇ ಛಾಯಾಗಡಿಯಾರದ ಉಗಮ. ಮುಂದೆ ಮನುಷ್ಯನಲ್ಲಿ ಕಾಲದ ಪ್ರಜ್ಞೆ ಸುಧಾರಿಸಿದಂತೆ ಛಾಯಾಗಡಿಯಾರಗಳಲ್ಲಿ ಮಾರ್ಪಾಡುಗಳೂ ಸೂಕ್ಷ್ಮಸುಧಾರಣೆಗಳೂ ಬಂದುವು. ಹೀಗೆ ಸಮಅಂತರವಿರುವ ತಾಸುಗಳನ್ನು ಗುರುತಿಸುವ ಛಾಯಾಗಡಿಯಾರಗಳನ್ನು ನಿರ್ಮಿಸಲು ಮನುಷ್ಯ ಪ್ರಯತ್ನಿಸಿದ. ಋತುಗಳು ವ್ಯತ್ಯಾಸವಾದಂತೆಲ್ಲ ಸೂರ್ಯನಿಂದ ಉಂಟಾದ ನೆರಳು ಪ್ರತಿನಿತ್ಯವೂ ಸ್ವಲ್ಪ ವ್ಯತ್ಯಾಸವಾಗುತ್ತದೆಂದೂ ಅದರಿಂದ ತಾಸುಗಳ ನಡುವಣ ಅವಧಿ ವ್ಯತ್ಯಸ್ತಗೊಳ್ಳವುದೆಂದೂ ಅವನಿಗೆ ತಿಳಿಯಿತು. ಈ ವಿಚಲನೆಯನ್ನು ಸರಿದೂಗಿಸಲು ಛಾಯಾಗಡಿಯಾರದಲ್ಲಿ ನಿಷ್ಕøಷ್ಟ ಕಾಲಸೂಚಕವಾಗಿ ಪರಿಣಮಿಸಲಿಲ್ಲ. ಬಿಸಿಲು ಬೀಳದ ಪ್ರದೇಶಗಳಲ್ಲಿ ಅಥವಾ ಬೀಳದ ಹಗಲುಗಳಲ್ಲಿ ಇವು ನಿರುಪಯುಕ್ತ. ಆದ್ದರಿಂದ ಕಾಲವನ್ನು ಸಮಂಜಸವಾಗಿ ತಿಳಿಸುವವರು ಸೂರ್ಯನ ಮೇಲೆ ಅವಲಂಬಿತವಾಗದೇ ಇರುವ ಗಡಿಯಾರಗಳನ್ನು ನಿರ್ಮಿಸಲು ಉದ್ಯುಕ್ತರಾದರು. ಜಲ ಮರಳು ತೈಲ ಗಡಿಯಾರಗಳೂ ಉರಿ ತಾಕಿಸಿದ ಹಗ್ಗ ಮೇಣದ ಬತ್ತಿಗಳೂ ಇಂಥವು.
(ನೋಡಿ- ಜಲಗಡಿಯಾರ)
(ನೋಡಿ- ಛಾಯಾ-ಗಡಿಯಾರ)

	ಯಾಂತ್ರಿಕ ಸಾಧನಗಳು : ನೈಸರ್ಗಿಕ ಘಟನೆಗಳನ್ನು ಅವಲಂಬಿಸಿ ರಚಿಸಿದ ಕಾಲಮಾಪನಸಾಧನೆಗಳೆಲ್ಲವೂ ಸೀಮಿತ ಉದ್ದೇಶವನ್ನು ಪರಿಮಿತವಲಯದೊಳಗೆ ಪೂರೈಸುತ್ತಿದ್ದವು ಮಾತ್ರ. ಅವು ಸೂಚಿಸುತ್ತಿದ್ದ ಕಾಲವಾದರೂ ತೀರ ಸ್ಥೂಲ. ವಿಜ್ಞಾನದ ಇತರ ಭಾಗಗಳು ಕ್ರಮೇಣ ಬೆಳೆದು ಬಂದಂತೆ ಯಾಂತ್ರಿಕ ಸಾಧನವೊಂದಕ್ಕೆ ಕಾಲಮಾಪನವನ್ನು ಲಗತ್ತಿಸುವುದು ಸರಿಯಾದ ಕ್ರಮ ಎಂದು ಮಾನವನಿಗೆ ಸ್ಫುರಿಸಿರಬೇಕು. ಈ ರೀತಿ 13ನೆಯ ಶತಮಾನದ ವೇಳೆಗೆ ಯಾಂತ್ರಿಕ ಗಡಿಯಾರ, ಇಂದಿನ ಅತಿ ನಾಜೂಕು ಗಡಿಯಾರಗಳ ಪೂರ್ವಜ, ಮೊಟ್ಟಮೊದಲಿಗೆ ರಂಗಸ್ಥಳ ಪ್ರವೇಶಿಸಿತು. ಆ ಶತಮಾನದಲ್ಲಿ ಯೂರೋಪ್ ಖಂಡದಲ್ಲೆಲ್ಲ ಗೋಪುರ ಗಡಿಯಾರಗಳು (ಟವರ್ ಕ್ಲಾಕ್ಸ್) ಸಾರ್ವತ್ರಿಕವಾಗಿ ಕಾಣಬರುತ್ತಿದ್ದುವು ಕ್ಲೋಷೆ (ಅರ್ಥ : ಹೊಡೆವ ಗಂಟೆ) ಎಂಬ ಫ್ರೆಂಚ್ ಪದದಿಂದ ಕ್ಲಾಕ್ ಎಂಬ ಪದ ವ್ಯುತ್ಪನ್ನಗೊಂಡಿತು. ಈ ಗಡಿಯಾರಗಳು ನಿರ್ದಿಷ್ಟ ಅಂತರಗಳಲ್ಲಿ ತಾಸುಗಳನ್ನು ಹೊಡೆದು ಜನರಿಗೆ ಕಾಲದ ಅರಿವನ್ನು ಮೂಡಿಸುತ್ತಿದ್ದುವು. ಈ ನಡುವಣ ಕಾಲವನ್ನು ತಿಳಿಸಲು, ತಾಸನ್ನು ತೋರಿಸುವ, ತಿರುಗುತ್ತಿರುವ ಒಂಟಿ ಮುಳ್ಳು ಇರುವ ಮುಖವನ್ನು (ಡಯಲ್) ಗಡಿಯಾರಕ್ಕೆ ಜೋಡಿಸಲಾಯಿತು. ನಿಖರವಾದ ಕಾಲವನ್ನು ತಿಳಿಸಲು ಸಹಾಯಕವಾಗುವಂತೆ ಮಿನಿಟು  ಮುಳ್ಳನ್ನು ಅಳವಡಿಸಲಾದ್ದು ಮತ್ತಷ್ಟು ದಿವಸಗಳು ಸಂದಮೇಲೆ.

	ಪ್ರಾರಂಭದ ಗಡಿಯಾರಗಳೆಲ್ಲ ತೂಕದ ಸಹಾಯದಿಂದ ಕೆಲಸಮಾಡುತ್ತಿದ್ದವು. ಒಂದು ತುದಿಗೆ ಭಾರವಾಗಿರುವ ವಸ್ತುವನ್ನು ಕಟ್ಟಿರುವ ಉದ್ದವಾದ ಹಗ್ಗ ಅಥವಾ ಸರಪಣಿಯನ್ನು ಒಂದು ಸಣ್ಣ ಉರುಳೆಗೆ ಸುತ್ತುತ್ತಿದ್ದರು. ನೇತಾಡುತ್ತಿರುವ ತೂಕ ಹಗ್ಗವನ್ನು ಜಗ್ಗುವುದರಿಂದ ಹಗ್ಗವೆಲ್ಲ ಹಿಂದಕ್ಕೆ ಬಿಚ್ಚಿಕೊಳ್ಳುವ ವರೆಗೂ ಆ ಉರುಳೆ ತಿರುಗುವಂತೆ ಮಾಡುತ್ತಿತ್ತು. ಇದಾದಮೇಲೆ ಉರುಳೆಯನ್ನು ಬಿಗಿಯಾಗಿ ಹಿಡಿದು ಹಗ್ಗವನ್ನು ಜಗ್ಗುವುದರಿಂದ ಹಗ್ಗವೆಲ್ಲ ಹಿಂದಕ್ಕೆ ಬಿಚ್ಚಿಕೊಳ್ಳುವ ವರೆಗೂ ಆ ಉರುಳೆ ತಿರುಗುವಂತೆ ಮಾಡುತ್ತಿತ್ತು. ಇದಾದಮೇಲೆ ಉರುಳೆಯನ್ನು ಬಿಗಿಯಾಗಿ ಹಿಡಿದು ಹಗ್ಗವನ್ನು ಪುನಃ ಅದಕ್ಕೆ ಸುತ್ತಬೇಕಾಗುತ್ತಿತ್ತು. ಇಲ್ಲವಾದರೆ ಗಡಿಯಾರ ನಿಂತು ಹೋಗುತ್ತಿತ್ತು. ಹೀಗೆ ಸುತ್ತುತ್ತಿರುವ ಉರುಳೆಯಿಂದ ಪಡೆದ ಶಕ್ತಿಯನ್ನು ಗಿಯರುಗಳ (ಹಲ್ಲು ಚಕ್ರಗಳು) ಮೂಲಕ, ಗಡಿಯಾರದ ಮುಳ್ಳುಗಳನ್ನು ಅಳವಡಿಸಿರುವ ಅಕ್ಷಗಳಿಗೆ ವರ್ಗಾಯಿಸಿ ಅವನ್ನು ತಿರುಗುವಂತೆ ಮಾಡಲಾಯಿತು. ಹಗ್ಗ ಸುತ್ತಿದ ಉರುಳೆಗೆ ಯಾವುದಾದರೂ ಒಂದು ರೀತಿಯ ನಿಯಂತ್ರಣಕಾರಿ (ರೆಗ್ಯುಲೇಟರ್) ಇಲ್ಲದಿದ್ದರೆ ಕೆಲವೇ ಮಿನಿಟುಗಳಲ್ಲಿ ತೂಕ ಕಟ್ಟಿರುವ ಹಗ್ಗ ಹಿಂದಕ್ಕೆ ಬಿಚ್ಚಿಕೊಂಡು ಬಿಡುವುದು ಸಹಜ. ಈ ನಿಯಂತ್ರಣಕಾರಿಯೇ ಗಡಿಯಾರದ ಹೃದಯ. ಇದನ್ನು ತಪ್ಪಿಸಿಕೊಳ್ಳುವಿಕೆ (ಎಸ್ಕೇಪ್‍ಮೆಂಟ್) ಎಂದು ಕರೆಯುತ್ತಾರೆ. ಎಲ್ಲ ತಪ್ಪಿಸಿಕೊಳ್ಳುವಿಕೆಗಳ ಹಿನ್ನಲೆಯಲ್ಲಿರುವ ಕಲ್ಪನೆಯೂ ಒಂದೇ ರೀತಿಯದು. ತೂಕದ ಸಹಾಯದಿಂದ ತಿರುಗುತ್ತಿರುವ ಉರುಳೆಗೆ ಅದರ ಸುತ್ತ ಗಿಯರ್ ಹಲ್ಲುಗಳಿವೆ. ಅಕ್ಕಪಕ್ಕ ಅಥವಾ ಮೇಲಕ್ಕೆ ಕೆಳಕ್ಕೆ ತೂಗಾಡುತ್ತಿರುವ ಸಂತುಲನಕ್ಕೆ (ಬ್ಯಾಲೆನ್ಸ್) ಅದರ ಪ್ರತಿಯೊಂದು ತುದಿಯಲ್ಲಿಯೂ ಒಂದು ತಡೆ ಅಥವಾ ಪ್ಯಾಲೆಟ್ ಉಂಟು. ಉರುಳೆ ಗಿಯರಿನ ಎರಡು ಹಲ್ಲುಗಳ ನಡುವೆ ಒಂದು ಪ್ಯಾಲೆಟ್ ಬಿದ್ದು ಒಂದು ಕ್ಷಣ ಅದನ್ನು ನಿಲ್ಲಿಸುತ್ತದೆ. ಆಗ ಹಲ್ಲಿನ ಬಾಗಿರುವ ಪಾಶ್ರ್ವ ಪ್ಯಾಲೆಟನ್ನು ಮೇಲಕ್ಕೆತ್ತಿ ಉರುಳೆಯನ್ನು ಬಿಡುಗಡೆಮಾಡುತ್ತದೆ. ಅದು ಚಲಿಸಲು ಪ್ರಾರಂಭಿಸಿದಾಗ ಸಂತುಲನದ ಬಾಹು ಉರುಳೆಯ ಹಲ್ಲುಗಳ ನಡುವೆ ಇನ್ನೊಂದು ತುದಿಯಲ್ಲಿರುವ ಪ್ಯಾಲೆಟನ್ನು ಬಲಾತ್ಕರಿಸಿ ಪುನಃ ಅದನ್ನು ನಿಲ್ಲುವಂತೆ ಮಾಡುತ್ತದೆ. ಈ ರೀತಿ ಉರುಳೆ ಪರ್ಯಾಯವಾಗಿ ಬಂಧಿಸಲ್ಪಡುತ್ತದೆ. ವಿಮೋಚನೆ ಹೊಂದುತ್ತದೆ. ಪುನಃ ಬಂಧಿಸಲ್ಪಡುತ್ತದೆ, ಇತ್ಯಾದಿ. ಇದರಿಂದಲೇ ಎಲ್ಲ ಗಡಿಯಾರಗಳೂ ಟಿಕ್-ಟಾಕ್ ಶಬ್ದಮಾಡುತ್ತವೆ, ಹಾಗೂ ಉರುಳೆ ಸುತ್ತುವ ವೇಗವೂ ನಿಯಂತ್ರಣಗೊಳಿಸಲ್ಪಡುತ್ತದೆ.

	ಬಹಳ ಕಾಲದ ವರೆಗೆ ಪ್ರತಿಯೊಂದು ಗಡಿಯಾರವನ್ನೂ ತೂಕದ ಸಹಾಯದಿಂದಲೇ ನಡೆಸುತ್ತಿದ್ದರು. ತೂಕ ಇಳಿಬೀಳಲು ಗಡಿಯಾರಗಳ ತಳಭಾಗದಲ್ಲಿ ಹೆಚ್ಚು ಜಾಗ ಬೇಕಾಗುತ್ತಿತ್ತು. ಈ ದಿಶೆಯಲ್ಲಿ ಮೊದಲು ಸುಧಾರಣೆ ಮಾಡಿದ ನಿಶಿತಮತಿ ಗೆಲಿಲಿಯೋನದು (1564-1642). ಇಗರ್ಜಿಯಲ್ಲಿ ಸ್ವೇಚ್ಛೇಯಿಂದ ಆಂದೋಲಿಸುತ್ತಿದ್ದ ತೂಗುದೀಪಗಳ ಚಲನೆ ಈತನ ಗಮನವನ್ನು ಆಕರ್ಷಿಸಿತು. ಇಂಥ ಒಂದು ದೀಪದ ತುಯ್ತ (ಇಂದಿನ ಪರಿಭಾಷೆಯಲ್ಲಿ ಕಂಪನವೈಶಾಲ್ಯ-ಆಂಪ್ಲಿಟ್ಯೂಡ್), ಗಾಳಿ ಜೋರು ಬೀಸಿದಾಗ ಬಲು ಹೆಚ್ಚಾಗಿದ್ದದ್ದು, ಕ್ರಮೇಣ ಕಡಿಮೆಯಾಗುತ್ತ ಬರುತ್ತಿತ್ತು ; ಆದರೆ ಪ್ರತಿಸಲವೂ ಒಂದು ಪೂರ್ಣ ಆಂದೋಳನವನ್ನು ಮುಗಿಸಲು ಆ ತೂಗುದೀಪ ತೆಗೆದುಕೊಳ್ಳತ್ತಿದ್ದ ಕಾಲಾವಧಿ ಒಂದೇ ಎಂಬುದು ಗೆಲಿಲಿಯೋನಿಗೆ ಗೋಚರಿಸಿತು. ಆಂದರೆ ತೂಗುದೀಪ ಅಸಮ ಚಾಪಗಳನ್ನು ಸಮಕಾಲದಲ್ಲಿ ರೇಖಿಸುತ್ತದೆ ಎಂಬ ಸಮಕಾಲತ್ವದ (ಐಸೊಕ್ರಾನಿಸಂ) ತತ್ತ್ವವನ್ನು ಅವನು ಗುರುತಿಸಿದ. ಈ ಸಂಶೋಧನೆಯ ಫಲವನ್ನು ಗೆಲಿಲಿಯೋ ಗಡಿಯಾರಸುಧಾರಣೆಗೆ ಬಳಸಿಕೊಳ್ಳದೇ ಹೋದರೂ ಇತರರು ಇದರಿಂದ ಪ್ರಯೋಜನವನ್ನು ಪಡೆದಕೊಂಡರು. 1965ರ ಸುಮಾರಿಗೆ ಕ್ರಿಸ್ಟಿಯನ್ ಹ್ಯೂಜೆನ್ಸ್ ಹಾಗೂ ಹೂಕ್, ಒಬ್ಬೊಬ್ಬನೂ ಪ್ರತ್ಯೇಕವಾಗಿ, ಹೊಸ ಯಾಂತ್ರಿಕ ಸುಧಾರಣೆಯನ್ನು ಗಡಿಯಾರದ ಯಂತ್ರರಚನೆಯಲ್ಲಿ ಅಳವಡಿಸಿದರು. ಇವರ ರಚನೆಗಳಲ್ಲಿ ಸುರುಳಿಸುತ್ತಿದ ಸ್ಪ್ರಿಂಗುಗಳು ಶಕ್ತಿಆಕರಗಳು, ತೂಗುತ್ತಿರುವ ತೂಕಗಳಲ್ಲ. ಈ ಸ್ಪ್ರಿಂಗುಗಳು ಆಕ್ರಮಿಸುವ ಜಾಗ ಸಹಜವಾಗಿ ಕಡಿಮೆ. ಇವು ಬಿಚ್ಚಿಕೊಂಡಂತೆ ಶಕ್ತಿ ಪೊರೈಕೆ ಆಗುತ್ತದೆ. ತೂಗಾಡುತ್ತಿರವ ಲೋಲಕ ತಪ್ಪಿಸಿ ಕೊಳ್ಳುವಿಕೆಯನ್ನು (ಎಸ್ಕೇಪ್‍ಮೆಂಟ್) ಕ್ರಿಯೆ ಎಸಗುವಂತೆ ಮಾಡಿ ಸ್ಪ್ರಿಂಗಿನಿಂದ ಶಕ್ತಿಯನ್ನು ಪಡೆಯುವ ಏರ್ಪಾಡಿದು. ಗೆಲಿಲಿಯೋ ಕಂಡುಹಿಡಿದ ಸಮಕಾಲತ್ವ ನಿಯಮದ ಕಾರಣದಿಂದ ಇಂಥ ಒಂದು ಗಡಿಯಾರ ನಿಷ್ಕøಷ್ಟವಾಗಿ ಕಾರ್ಯಮಾಡಬಲ್ಲುದು ಎಂದು ಅವರಿಗೆ ಮನವರಿಕೆ ಆಗಿತ್ತು.

	ಪುರಾತನಕಾಲದಿಂದಲೂ ಗಡಿಯಾರನಿರ್ಮಾಪಕರು ಗಡಿಯಾರಗಳು ತಾಸುಗಳನ್ನು ತಿಳಿಸುವುದಷ್ಟೇ ಅಲ್ಲ ಬೇರೆ ಇತರ ಅನೇಕ ಮಾಹಿತಿಗಳನ್ನೂ ಒದಗಿಸಬೇಕೆಂದು ಬಯಸಿದ್ದರು. ಕೆಲವು ಗಡಿಯಾರಗಳ ಮುಖಗಳು ದಿನ, ತಿಂಗಳು, ವರ್ಷ ಚಂದ್ರನ ಕಲೆಗಳು, ನಕ್ಷತ್ರಗಳ ಸ್ಥಾನಗಳು ಮತ್ತು ವಿಷುವತ್‍ಕಾಲಗಳನ್ನು ತೋರಿಸುತ್ತಿದ್ದುವು. ಕೆಲವು ನಿರ್ದಿಷ್ಟ ತಾಸುಗಳಲ್ಲಿ ಬಾಗಿಲುಗಳನ್ನು ತೆರೆದ ಹೊರಕ್ಕೆ ಬಂದು ತಲೆಬಗ್ಗಿಸಿ ನಮಸ್ಕಾರ ಮಾಡಿ ಆಮೇಲೆ ನರ್ತನ ಮಾಡಿ ಪಿಟೀಲು ನುಡಿಸಿ ಕೊಂಬುಗಳನ್ನು ಊದಿ ಅನಂತರ ಅದೃಶ್ಯವಾಗುವ ರಚನೆಗಳು ಕೆಲವು ಗಡಿಯಾರಗಳಲ್ಲಿದ್ದುವು. ಪ್ರತಿ ಕಾಲುತಾಸಿಗೂ ಸಂಪೂರ್ಣ ಬೊಂಬೆಯಾಟವನ್ನು ಪ್ರದರ್ಶಿಸುವುದೂ ಇತ್ತು. ಇನ್ನು ಬೇರೆ ರೀತಿಯವುಗಳಲ್ಲಿ ಗರಿಗಳನ್ನು ಕೆದರಿಕೊಂಡು ಹಾಡುವ ಪಕ್ಷಿಗಳು, ಒದೆಯುವ ಹೇಸರಕತ್ತೆಗಳು, ಕುದುರೆಯ ಮೇಲೆ ಸವಾರಿಮಾಡುತ್ತಿರುವ ಸರದಾರರು ಮತ್ತು ಧಾರ್ಮಿಕ ಸಂಬಂಧವಾದ ಮೆರವಣಿಗೆಗಳು ಇರುತ್ತಿದ್ದುವು. ಅತ್ಯಂತ ಆಸಕ್ತಿಯನ್ನು ಉಂಟುಮಾಡುವ ಮತ್ತು ಶ್ರಮಸಾಧಿತವಾದ ಪುರಾತನ ಗಡಿಯಾರಗಳಲ್ಲೊಂದು ಫ್ರಾನ್ಸ್ ದೇಶದ ಅಲ್ಸಾಸ್‍ನಲ್ಲಿರುವ ಸುಂದರವಾದ ಸ್ಟ್ರಾಸ್‍ಬರ್ಗ ದೇವಮಂದಿರದ ಹಿಂಭಾಗದ ವಿಶಿಷ್ಟ ಕೋಣೆಯಲ್ಲಿದೆ. ಇದೇ ಮೂರು ಗೋಪುರಗಳುಳ್ಳ ಮೂರು ಅಂತಸ್ತಿನ ಖಗೋಳೀಯ ಗಡಿಯಾರ ಇದೊಂದು ಆಶ್ಚರ್ಯಕರವಾದ ನಿರ್ಮಾಣ. ಇದರಲ್ಲಿ ಖಗೋಳೀಯ ಗೋಳವೊಂದಿದೆ. ಗೋಳದ ಮೇಲೆ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳ ಸ್ಥಾನ, ಶಾಶ್ವತವಾದ ಪಂಚಾಂಗ, ಮೂರ್ತಿಪೂಜಕರು ಯಾವ ದೇವತೆಗಳ ಹೆಸರಿನಲ್ಲಿ ವಾರದ ದಿವಸಗಳನ್ನು ನಾಮಕರಣಮಾಡಿದ್ದಾರೋ ಆ ದೇವತೆಗಳ ಉತ್ಸವಗಳನ್ನು ಒಳಗೊಂಡಿರುವ ಅನೇಕ ಚಲಿಸುವ ಉತ್ಸವಗಳು, ಒಂಟಿಯಾಗಿರುವ ಅನೇಕ ಬೊಂಬೆಗಳು ಇತ್ಯಾದಿ ಇವೆ. ಇಂಥ ಪ್ರಖ್ಯಾತವಾದ ಗಡಿಯಾರದ ತುದಿಯ ಮೇಲೆ ಒಂದು ಕೊಬ್ಬಿದ ಹುಂಜ ಉಂಟು. ಇದು ತನ್ನ ಪುಕ್ಕಗಳನ್ನು ಕೆದರುವುದು, ರೆಕ್ಕೆಗಳನ್ನು ಬಡಿಯುವುದು ಮತ್ತು ಮೂರಾವರ್ತಿ ಕೋಳಿ ಕೂಗುವುದು ಇವುಗಳನ್ನೆಲ್ಲ ಮಾಡುವಂತೆ ರೂಪಿಸಲಾಗಿದೆ. ನಡುಹಗಲು ಮತ್ತು ನಡುರಾತ್ರಿ ಈ ರೀತಿ ದಿವಸಕ್ಕೆರಡಾವರ್ತಿ ಗಡಿಯಾರಕ್ಕೆ ಚೇತನಮೂಡಿ ಎಲ್ಲ ಗೊಂಬೆಗಳೂ ಪ್ರದರ್ಶನ ನೀಡುವ ವ್ಯವಸ್ಥೆ ಇದರಲ್ಲಿ ಉಂಟು.

	16ನೆಯ ಶತಮಾನದ ಮೊದಲು ಜನ ಕಾಲವನ್ನು ತಿಳಿಯಲು ಗೋಪುರ ಗಡಿಯಾರಗಳ ಭೋಂ ನಾದವನ್ನು ಅದು ಕೇಳುವಷ್ಟು ದೂರದ ವರೆಗೂ ಅವಲಂಬಿಸಿದ್ದರು. ಅದು ಕೇಳದಾದಾಗ ತಮ್ಮೊಡನೆ ಒಯ್ಯಬಲ್ಲ ಒಂದು ಸುಲಭ ಗಡಿಯಾರ ಇದ್ದಿದ್ದರೆ ಎಷ್ಟು ಅನುಕೂಲವಾಗುತ್ತಿತ್ತು ಎಂದು ಕನಸು ಕಾಣುತ್ತಿದ್ದರು. ನ್ಯೂರೆಂಬರ್ಗಿನ ಪೀಟರ್ ಹೆನ್‍ಲೀನ್ ಎಂಬಾತ 16ನೆಯ ಶತಮಾನದ ಆರಂಭದಲ್ಲಿ ಇಂಥ ಕನಸನ್ನು ನನಸಾಗಿ ಮಾಡುವುದರಲ್ಲಿ ತಕ್ಕಮಟ್ಟಿಗೆ ಯಶಸ್ಸು ಗಳಿಸಿದ. ಸ್ವತಃ ಗಡಿಯಾರ ನಿರ್ಮಾಪಕನಾದ ಹೆನ್‍ಲೀನ್ ಸುರುಳಿ ಸುತ್ತಬಹುದಾದ ಸ್ಪ್ರಿಂಗನ್ನು ಬಳಸಿ ಸಾಗುಗಡಿಯಾರವನ್ನೇನೋ ನಿರ್ಮಿಸಿದ. ಆದರೆ ಈ ಗಡಿಯಾರ ಸಾಕಷ್ಟು ದೊಡ್ಡದಾಗಿಯೇ ಇತ್ತು. ಅದರ ಆಕಾರ ದೊಡ್ಡ ಕೋಳಿಮೊಟ್ಟೆಯಂತೆ ಇದ್ದುದರಿಂದ ಅದಕ್ಕೆ ನ್ಯೂರೆಂಬರ್ಗಿನ ಮೊಟ್ಟೆ ಎಂದು ಜನ ಅಡ್ಡ ಹೆಸರಿಟ್ಟು ಗೇಲಿಮಾಡಿದರು. ಈ ಗಡಿಯಾರ ಕಾಲವನ್ನು ನಿಷ್ಕøಷ್ಟವಾಗಿ ಸೂಚಿಸುವಲ್ಲಿ ವಿಫಲವಾಯಿತು. ಸುತ್ತಿದ್ದ ಸ್ಪ್ರಿಂಗಿನಿಂದ ಗಡಿಯಾರದ ವಿವಿಧ ಚಕ್ರಗಳ ಚಲನೆಗೆ ಪೂರೈಕೆ ಆಗುತ್ತಿದ್ದ ಶಕ್ತಿಯ ದರ ಏಕರೀತಿ ಇರುತ್ತಿರಲಿಲ್ಲವಾದ್ದರಿಂದ ಕಾಲಸೂಚನೆಯಲ್ಲಿ ಕ್ರಮ ತಪ್ಪುತ್ತಿತ್ತು. ಗಡಿಯಾರರಚನೆಯಲ್ಲಿ ಶಕ್ತಿಯ ಪೂರೈಕೆ ಆದೆಷ್ಟು ಅಗತ್ಯವೋ ಅದರ ಪೂರೈಕೆಯಲ್ಲಿ ಸ್ಥಿರ ದರವೂ ಅಷ್ಟೇ ಅಗತ್ಯ. ಇದನ್ನು ಪರಿಗಣಿಸಿ ಈ ಹಿಂದೆ ಹೇಳಿದ ಹೂಕ್ ಎಂಬ ವಿಜ್ಞಾನಿ ನಿಯಂತ್ರಣಕಾರಿಯನ್ನು ಉಪಜ್ಞಿಸಿದ. ಹಂದಿ ದೊಗಲಿನಿಂದ ಅತಿ ಗಡುಸಾದ ರೋಮವನ್ನು ಕಿತ್ತು ಅದನ್ನು ನಿಯಂತ್ರಣಕಾರಿಯಾಗಿ ಉಪಯೋಗಿಸಿಕೊಂಡ. ಅದನ್ನು ಎಷ್ಟು ತಿರುಚಿದರೂ ಪುನಃ ಅದು ಯಥಾಸ್ಥಿತಿಗೆ ಬರುವಷ್ಟು ಕಾಠಿಣ್ಯ ಪಡೆದಿತ್ತು. ಮುಂದೆ ಈ ರಚನೆಯಲ್ಲಿ ಸುಧಾರಣೆ ಆಗಿ ಹಂದಿರೋಮದ ಬದಲು ಕಠಿನ ಆದರೆ ಬಲು ಸೂಕ್ಷ್ಮ ಉಕ್ಕಿನ ಸ್ಪ್ರಿಂಗುಗಳ ಬಳಕೆ ಬಂತು. ಇದನ್ನು ರೋಮಸ್ಪ್ರಿಂಗುಗಳೆಂದೇ (ಹೇರ್ ಸ್ಪ್ರಿಂಗ್) ಕರೆಯುವುದು ವಾಡಿಕೆ ಆಯಿತು.

	1550 ವರೆಗೂ ಗಡಿಯಾರ ನಿರ್ಮಾಪಕರು ಗಡಿಯಾರಗಳ ರಚನೆಯಲ್ಲಿ ಕಬ್ಬಿಣವನ್ನೆ ಉಪಯೋಗಿಸುತ್ತಿದ್ದರು. ಆಮೇಲೆ ಹಿತ್ತಾಳೆ ಚಕ್ರಗಳು ಮತ್ತು ಸ್ಕ್ರೂಮೊಳೆಗಳಿಗೆ ತಮ್ಮ ದೃಷ್ಟಿಯನ್ನು ಹರಿಸಿದರು. 1600ರ ಹೊತ್ತಿಗೆ ಗಡಿಯಾರದ ಮುಖಗಳಿಗೆ ಗಾಜಿನ ಹರಳುಗಳನ್ನು ಜೋಡಿಸುವುದು ಆರಂಭವಾಯಿತು. ಅಪರೂಪವಾಗಿ ಮಿನಿಟು ಮುಳ್ಳನ್ನು ಉಪಯೋಗಿಸುತ್ತಿದ್ದರು. ಏಕೆಂದರೆ ಆ ಕಾಲದ ವರೆಗೆ ಮಾಡಿದ ಗಡಿಯಾರಗಳು ಕರಾರುವಾಕ್ಕಾದ ಕಾಲವನ್ನು ತೋರಿಸುತ್ತಲೇ ಇರಲಿಲ್ಲ. ಆ ದಿನಗಳಲ್ಲಿ ಸರಿಯಾದ ಕಾಲವನ್ನು ತಿಳಿಯಬೇಕಾದವರು ಪರಸ್ಪರವಾಗಿ ತಾಳೆನೋಡಲು ಎರಡು ಅಥವಾ ಮೂರು ಗಡಿಯಾರಗಳನ್ನು ಒಯ್ಯಬೇಕಾಗಿತ್ತು. ಗಡಿಯಾರವನ್ನು ಕಾಲಸೂಚಕ ಉಪಕರಣಕ್ಕಿಂತಲೂ ಹೆಚ್ಚಾಗಿ ಅಲಂಕಾರದ ಆಭರಣವೆಂದು ಜನ ಪರಿಗಣಿಸುತ್ತಿದ್ದರು. ಆದ್ದರಿಂದ ಗಡಿಯಾರ ನಿರ್ಮಾಪಕರ ಅಧಿಕ ಲಕ್ಷ್ಯ ಕುಸರಿ ಕೆಲಸಗಳ ಮೇಲೆ ಬೀರಿತೇ ವಿನಾ ಯಂತ್ರ ಸುಧಾರಣೆಯ ಮೇಲಲ್ಲ.

	ಕರಾರುವಾಕ್ಕಾದ ಗಡಿಯಾರಗಳನ್ನು ಹೇಗೆ ರೂಪಿಸಬಹುದೆಂಬುದನ್ನು ಗಡಿಯಾರದ ನಿರ್ಮಾಪಕರು ತಿಳಿಯಲು ಆರಂಭಮಾಡಿದ್ದು 18ನೆಯ ಶತಮಾನದ ಆದಿಭಾಗದಲ್ಲಿ. 1704ರಲ್ಲಿ ಸ್ವಿಟ್ಜರ್‍ಲೆಂಡಿನ ನಿಕೊಲಾಸ್ ಫೇಸಿಯೋ ಎಂಬಾತ ಗಡಿಯಾರಗಳಲ್ಲಿ ರತ್ನದ ಆಧಾರಕಗಳನ್ನು (ಬ್ಯಾರಿಂಗ್ಸ್) ಉಪಯೋಗಿಸಿದ. ರತ್ನಪಡಿ ವ್ಯಾಪಾರಿ 7-ರತ್ನ ಅಥವಾ 21-ರತ್ನಗಳ ಗಡಿಯಾರದ ವಿಷಯವಾಗಿ ಮಾತನಾಡಿದಾಗ ಅದರ ತಾಂತ್ರಿಕ ಅರ್ಥವಿಷ್ಟೆ : ಅಷ್ಟು ಸಂಖ್ಯೆಯ ರತ್ನಾಧಾರಕಗಳು ಆ ಗಡಿಯಾರದಲ್ಲಿವೆ ; ಅದರ ವಿವಿಧ ಚಕ್ರಗಳ ಅಕ್ಷಗಳ ಕೊನೆಯಲ್ಲಿ ಈ ಕಠಿನ ರತ್ನಗಳು ಆಧಾರಗಳಾಗಿ ಇವೆ. ಅಗ್ಗವಾದ ಗಡಿಯಾರಗಳಲ್ಲಿ ಈ ಅಕ್ಷಗಳು ಹಿತ್ತಾಳೆ ಆಧಾರಕಗಳಲ್ಲಿನ ಸಣ್ಣ ರಂಧ್ರಗಳಲ್ಲಿ ಆಂದೋಲಿಸುತ್ತವೆ. ಈ ಕ್ರಿಯೆಯಲ್ಲಿ ಒಂದು ಲೋಹ ಇನ್ನೊಂದರ ಮೇಲೆ ಅವಿಚ್ಛಿನ್ನವಾಗಿ ಉಜ್ಜುವುದರಿಂದ ರಂಧ್ರ ಕ್ರಮೇಣ ದೊಡ್ಡದಾಗಿ ಅಕ್ಷ ಸವೆದು ಹೋಗುತ್ತದೆ. ಆಗ ಚಕ್ರಗಳ ಮಾಲುತ್ತ ತಿರುಗುವುದರಿಂದ ಗಡಿಯಾರ ಕರಾರುವಾಕ್ಕಾದ ಕಾಲವನ್ನು ತೋರಿಸುವುದರಲ್ಲಿ ವಿಫಲವಾಗುವುದು. ರತ್ನದ ಆಧಾರಕಗಳು ಬಲು ಕಠಿನ ಮತ್ತು ನುಣುಪು ; ಹಲವಾರು ದಶಕಗಳ ಕಾಲ ಅವು ಸ್ವಲ್ಪವೂ ಸವೆದುಹೋಗದೆ ಚಕ್ರಗಳ ಆಂದೋಲನ ಅವಿಚ್ಛಿನ್ನವಾಗಿ ನಡೆಯಬಲ್ಲುದು. ರತ್ನಾಧಾರಕಗಳ ಸಂಖ್ಯೆ ಅಧಿಕವಾಗಿದ್ದಷ್ಟೂ ಆ ಗಡಿಯಾರದ ಆಯುಸ್ಸು. ಬೆಲೆ ಎರಡೂ ಅಧಿಕ. ಗಡಿಯಾರದ ಒಳಗೆ ಸುಮಾರು 5 ಬಗೆಯ ರತ್ನಧಾರಕಗಳು ಇರುತ್ತದೆ. ಅವು ಹೀಗಿವೆ: ಪ್ಯಾಲೆಟ್, ಕ್ಯಾಪ್, ಹೊಲ್, ಶಾಕ್ ಅಬ್ಸರ್ವರ್, ರೋಲರ್. ಗಡಿಯಾರಕ್ಕೆ 5

	ಗೋಡೆ ಗಡಿಯಾರಗಳು ಕಿಸೆಗಡಿಯಾರಗಳು ಮತ್ತು ಕೈಗಡಿಯಾರಗಳು ಎಂಬ ಮೂರುಪ್ರರೂಪಗಳಾಗಿ ಕಾಲಸೂಚಕಯಂತ್ರ ವಿಕಾಸಗೊಂಡು ಬೆಳೆದಿದೆ. ಈ ಶತಮಾನದ ಆದಿಯ ಕಿಸೆಗಡಿಯಾರಗಳಿಗೆ, ಇಂದಿನ ಗೋಡೆ ಗಡಿಯಾರಗಳ ರೀತಿಯಲ್ಲೇ, ಪ್ರತ್ಯೇಕವಾದ ಹಿಡಿಯಿಂದ ಕೀಲಿ ಕೊಡಬೇಕಾಗಿತ್ತು. ಈ ಹಿಡಿಯೂ ಗಡಿಯಾರದ ಒಂದು ಅಂಗವಾಗಿ ರೂಪ ತಳೆದದ್ದು ಮುಂದಿನ ಸುಧಾರಣೆ. ಒಂದನೆಯ ಮಹಾಯುದ್ಧದ ಕಾಲದಲ್ಲಿ ಗಡಿಯಾರಗಳ ಮಾದರಿಗಳಲ್ಲಿ ತೀವ್ರ ಬದಲಾವಣೆಗಳನ್ನು ಮಾಡಿತು. ಗಡಿಯಾರ ಯಂತ್ರಗಳಲ್ಲಿ ಚಕ್ರಗಳನ್ನು ಜೋಡಿಸುವ ನವೀನಮಾರ್ಗಗಳನ್ನು ಉಪಜ್ಞೆಕಾರರು ಕಂಡುಹಿಡಿದುದರಿಂದ ಕಿಸೆಗಡಿಯಾರಗಳು ಹೆಚ್ಚು ಹೆಚ್ಚು ತೆಳು ಆಗುತ್ತ ಬಂದುವು. ಅಲ್ಲಿಯವರೆಗೂ ಸಾಧಾರಣವಾಗಿ ಪ್ರತಿಯೊಬ್ಬನು ಗಡಿಯಾರವನ್ನು ಕಿಸೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದ. ಕೈಗಡಿಯಾರದ ಬಳಕೆ ನಾಚಿಕೆಗೇಡಿನದೆಂದು ಅಂದಿನ ಜನ ಭಾವಿಸಿದ್ದರು. ಇಂಥ ಪ್ರಚಲಿತ ನಂಬಿಕೆಗಳನ್ನು ಯುದ್ಧ ವ್ಯತ್ಯಸ್ತಗೊಳಿಸಿತು. ಕಂದಕಗಳಲ್ಲಿದ್ದಾಗ ಸೈನಿಕರಿಗೆÉ ಕೈಗಡಿಯಾರ ಅತ್ಯಗತ್ಯವಾಗಿತ್ತು. ನಿಲುವಂಗಿ, ಅನಿಲ ಮೊಗವಾಡ ಮತ್ತು ತೋಟಗಳನ್ನು ಸಿಕ್ಕಿಸಿದ ಅಡ್ಡಪಟ್ಟಿಗಳೊಳಗೆ ಹುದುಗಿದ್ದ ಕಿಸೆಗಡಿಯಾರವನ್ನು ಸುಲಭವಾಗಿ ಹೊರಕ್ಕೆ ತೆಗೆಯುವುದಕ್ಕಾಗುತ್ತಿರಲಿಲ್ಲ. ಕತ್ತಲಲ್ಲಿ ಓದಬಹುದಾದ ಗಡಿಯಾರದ ಮುಖವುಳ್ಳದ್ದು ಅತ್ಯಂತ ಜರೂರಾಗಿ ಬೇಕು ಎಂಬುದನ್ನು ಯುದ್ಧ ತಂದೊಡ್ಡಿತು. ಮುಖದ ಮೇಲಿನ ಸಂಖ್ಯೆಗಳಿಗೆ ರೇಡಿಯಮ್ಮನ್ನು ಲೇಪಿಸಿದರೆ ಅವು ಕತ್ತಲಲ್ಲಿ ವಿನುಗುಟ್ಟುತ್ತವೆ. ಎಂದು ಗಡಿಯಾರನಿರ್ಮಾಕರು ಕಂಡು ಹಿಡಿದರು. ಈ ಉಪಜ್ಞೆ ಕೂಡ ಯುದ್ಧಾವಶ್ಯಕತೆಯಾಗಿಯೇ ಮೊದಲು ಮೈತಳೆದದ್ದು.	                           (ಆರ್.ವಿ.ಎಂ.; ಎಂ.ಯು.)

	ಆಧುನಿಕ ಗಡಿಯಾರದ ಯಂತ್ರವಿನ್ಯಾಸ : ಗಡಿಯಾರ ಕಾಲವನ್ನು ಅಳೆದು ಸೂಚಿಸುವುದು ಒಂದು ಆಂದೋಳಕ ವ್ಯವಸ್ಥೆಯ ನೆರವಿನಿಂದ. ಸಂತಲನ (ಬ್ಯಾಲೆನ್ಸ್) ಮತ್ತು ಸ್ಪ್ರಿಂಗ್ ಎಂಬ ಆಂದೋಲಿಸುತ್ತಿರುವ ರೂಪವನ್ನು ಈ ವ್ಯವಸ್ಥೆ ಪಡೆದಿದೆ. ಆಂದೋಲನ ಕಾಲದಲ್ಲಿ ಸಂತುಲನವನ್ನು ಕಾಪಾಡಿಕೊಂಡು ಬರಲು ಬೇಕಾಗುವ ಶಕ್ತಿ ಪ್ರಧಾನ ಸ್ಪ್ರಿಂಗಿನಲ್ಲಿ ಶೇಖರವಾಗಿರುತ್ತದೆ. ಗಡಿಯಾರಕ್ಕೆ ಕೀಲಿ ಕೊಡುವುದೆಂದರೆ ಸ್ಪ್ರಿಂಗಿನಲ್ಲಿ ಶಕ್ತಿ ಸಂಚಯನ ಮಾಡುವುದು ಎಂದರ್ಥ. ಗಡಿಯಾರದಲ್ಲಿನ ವಿವಿಧ ಬಿಡಿಭಾಗಗಳು ಮತ್ತು ಯಂತ್ರವಿನ್ಯಾಸಗಳನ್ನು (ಮೆಕಾನಿಸಂಸ್) ಇಬಾಷೆ, ಚಕ್ರಗಳ ಸಾಲು, ತಪ್ಪಿಸಿಕೊಳ್ಳುವಿಕೆ (ಎಸ್ಕೇಪ್‍ಮೆಂಟ್), ನಿಯಂತ್ರಣ ಯಂತ್ರವಿನ್ಯಾಸ (ಕಂಟ್ರೊಲ್ ಮೆಕಾನಿಸಂ), ಚಲನೆಯ ಯಂತ್ರವಿನ್ಯಾಸ, ಕೋಶ (ಕೇಸ್), ಮುಖ ಮತ್ತು ಮುಳ್ಳುಗಳು ಹೀಗೆ ಎಂಟು ಗುಂಪುಗಳಾಗಿ ವಿಂಗಡಿಸಬಹುದು. ಗಡಿಯಾರದ ಚಲನೆಯ ಕ್ರಿಯಾವಿನ್ಯಾಸದಲ್ಲಿ ವಿವಿಧ ಕಾರ್ಯಗಳನ್ನು ನಡೆಸುವ ಭಾಗಗಳಿರುವ ಪ್ರಧಾನ ಫಲಕವೊಂದಿದೆ. ಇದರಲ್ಲಿ ಗಿಯರು ಚಕ್ರಗಳು, ತಪ್ಪಿಸಿಕೊಳ್ಳುವಿಕೆ ಮತ್ತು ಸಂತುಲನಗಳನ್ನು ಸೂಕ್ತ ಆಧಾರಗಳಿಂದ ಅವುಗಳ ಸ್ಥಾನಗಳಲ್ಲಿರಿಸಿದೆ. ಫಲಕ ಮತ್ತು ಆಧಾರಗಳು ಒಂದು ಚೌಕಟ್ಟನ್ನು ರೂಪಿಸುತ್ತವೆ. ಇದನ್ನು ರೂಢಿಯಲ್ಲಿ ಇಬಾಷೆ ಎಂದು ಹೆಸರಿಸುತ್ತಾರೆ.

	ಚಲನೆಯ ಯಂತ್ರವಿನ್ಯಾಸ (ಮೋಟಾರ್ ಮೆಕಾನಿಸಂ) : ಇದರಲ್ಲಿ ಗಾಲಿಯ ಅಚ್ಚು ಮತ್ತು ಪ್ರಧಾನ ಸ್ಪ್ರಿಂಗ್ ಇವುಗಳಿಂದ ಪೂರ್ಣವಾಗಿರುವ ಉರುಳೆಯೊಂದಿದೆ (ಚಿತ್ರ 2). ಚಲಿಸುತ್ತಿರುವಾಗ ಘರ್ಷಣೆ ಮತ್ತು ಗಾಳಿಯ ರೋಧದಿಂದ ಗಡಿಯಾರದ ಸಂತುಲನ ನಿಂತುಹೋಗುವ ಪ್ರವೃತ್ತಿ ಪಡೆದಿದೆ. ಗಡಿಯಾರದ ಚಲನೆ ಮುಂದುವರಿಯಬೇಕಾದರೆ ನಷ್ಟವಾದ ಶಕ್ತಿಯನ್ನು ತುಂಬಿಕೊಡುವುದು ಅಗತ್ಯ. ಉರುಳೆಯಲ್ಲಿ ಶೇಖರವಾಗಿರುವ ಪ್ರವರ್ತಕ ಸಾಮಥ್ರ್ಯದಿಂದ (ಮೋಟಿವ್ ಪವರ್) ನಷ್ಟವಾದ ಶಕ್ತಿ ಪೂರೈಕೆಯಾಗುತ್ತದೆ. ಗಡಿಯಾರಕ್ಕೆ ಕೀಲಿ ಕೊಟ್ಟಾಗ ಪ್ರಧಾನ ಸ್ಪ್ರಿಂಗ್ ಉರುಳೆಯ ಅಚ್ಚಿನ ಸುತ್ತ ಸುರುಳಿ ಸುತ್ತುಕೊಳ್ಳುತ್ತದೆ. ಇದರಿಂದ ಅಚ್ಚು ತಿರುಗುವ ಸಾಮಥ್ರ್ಯ ಪಡೆದು ಚಕ್ರಗಳ ಸಾಲನ್ನು ಚಲಿಸುವಂತೆ ಮಾಡುತ್ತದೆ. 

ಗಡಿಯಾರದ ಪ್ರಧಾನ ಸ್ಪ್ರಿಂಗಿನ ಉದ್ದ ಸುಮಾರು 290 ಮಿ.ಮೀ. ಅಗಲ ಸುಮಾರು 1.25 ಮಿ.ಮೀ. ದಪ್ಪ ಸುಮಾರು 0.11 ಮಿ.ಮೀ. ಸ್ಪ್ರಿಂಗನ್ನು ಮೈಕ್ರೊಮೀಟರಿನಿಂದ ಅಳೆಯಬಹುದು. ಇದಕ್ಕಾಗಿಯೇ ವಿಶೇಷವಾಗಿ ತಯಾರಿಸಿದ ವಿಶಿಷ್ಟ ಮಿಶ್ರಲೋಹದಿಂದ ಇದನ್ನು ನಿರ್ಮಿಸಿದೆ. ಪ್ರಧಾನ ಸ್ಪ್ರಿಂಗ್ ಚೆನ್ನಾಗಿ ಕಾರ್ಯ ನಡೆಸಬೇಕಾದರೆ ಅದನ್ನು ನಿರ್ಮಿಸಲು ಉಪಯೋಗಿಸುವ ವಸ್ತುವಿನ ಗುಣವಿಶೇಷ ಮತ್ತು ಅದರ ಮೇಲ್ಮೈಯ ಹೊಳಪಿನ ಅಂಶ ಇವುಗಳೆಲ್ಲ ಹೆಚ್ಚಿನ ಮಟ್ಟದವಾಗಿರಬೇಕಾದ್ದು ಅತಿ ಮುಖ್ಯ.

	ಪ್ರೇಷಣೆ (ಟ್ರಾನ್ಸ್‍ಮಿಶನ್) : ಗಡಿಯಾರದಲ್ಲಿ ಪ್ರೇಷಣೆ ನಡೆಯುವುದು ಗಿಯರುಗಳು ಸಾಲಿನ ಮೂಲಕ (ಚಿತ್ರ 1). ಗಿಯರು ಚಕ್ರಗಳ ಜೋಡಣೆ ಇಲ್ಲದೆ ಕಾರ್ಯ ನಡೆಸುವ ಯಂತ್ರಗಳ ಸಂಖ್ಯೆ ಅತ್ಯಲ್ಪ. ಗಡಿಯಾರದಲ್ಲಿ ಮುಖ್ಯ ವಿಷಯವೇನೆಂದರೆ ಈ ಭಾಗಗಳ ಅತಿ ಸೂಕ್ಷ್ಮತೆ. ಗಿಯರುಗಳ ಮೇಲಿನ ಅಂಚುಗೆರೆಗಳನ್ನು ಸ್ಫುಟವಾಗಿ ಭೂತಕನ್ನಡಿಯ ಸಹಾಯದಿಂದ ಮಾತ್ರ ನೋಡಬಹುದು. ಗಡಿಯಾರದ ಚಕ್ರಗಳ ಸಾಲನ್ನು ನಿರ್ಮಿಸಲು ಅಧಿವೃತ್ತಜಗಳ (ಎಪಿಸೈಕ್ಲಾಯಿಡ್ಸ್) ಹೊರ ಗೆರೆಗಳನ್ನು ಆಯ್ಕೆ ಮಾಡಿಕೊಳ್ಳುತಾರೆ. ಹಲ್ಲುಗಳ ಪರಿಮಾಣ ಮಿಲಿಮೀಟರಿನ ಸಾವಿರದಲ್ಲೊಂದು ಪಾಲಿನಷ್ಟು ನಿಷ್ಕøಷ್ಟವಾಗಿರಬೇಕು; ಚಲಿಸುತ್ತಿರುವ ಭಾಗಗಳ ಕೇಂದ್ರಗಳ ನಡುವಣ ದೂರಕ್ಕೂ ಇದೇ ಅನ್ವಯಿಸುತ್ತದೆ.

	ತಪ್ಪಿಸಿಕೊಳ್ಳುವಿಕೆ (ಎಸ್ಕೇಪ್‍ಮೆಂಟ್) : ಇದರಲ್ಲಿ ತಪ್ಪಿಸಿಕೊಳ್ಳುವ ಚಕ್ರ ಮತ್ತು ಪ್ಯಾಲೆಟ್ ಕವ ಇವೆ (ಚಿತ್ರ 3). ತಪ್ಪಿಸಿಕೊಳ್ಳುವಿಕೆಯಲ್ಲಿ ಹಲವಾರು ರೀತಿಯವುಗಳಿವೆ. ಹೆಚ್ಚು ಬಳಕೆಯಲ್ಲಿರುವುದು ಸನ್ನೆ ತಪ್ಪಿಸಿಕೊಳ್ಳುವಿಕೆ ಮಾದರಿಯದು. ತಪ್ಪಿಸಿಕೊಳ್ಳುವ ಚಕ್ರದ ಹಲ್ಲುಗಳು ಕ್ಯಾಲೆಟುಗಳ ಅಥವಾ ಪ್ಯಾಲೆಟುಗಳ (ರತ್ನದ ಸನ್ನೆ ತಪ್ಪಿಸಿಕೊಳ್ಳುವಿಕೆ ಇದ್ದ ಪಕ್ಷದಲ್ಲಿ) ಮೂಲಕ ಸನ್ನೆ ಅಥವಾ ಕವೆಗಳ ಮೇಲೆ ಕಾರ್ಯ ನಡೆಸುತ್ತವೆ. 
ರಾಸ್‍ಕಾಫ್ ಗಡಿಯಾರಗಳಲ್ಲಿ ಉಪಯೋಗಿಸುವ ಸೂಜಿ ತಪ್ಪಿಸಿಕೊಳ್ಳುವಿಕೆ ಸರಳವಾದ್ದು. ಇದರಲ್ಲಿ ಪ್ಯಾಲೆಟುಗಳ ಬದಲಾಗಿ ಉಕ್ಕಿನ ಸೂಜಿಗಳು ಅಥವಾ ಗೂಟಗಳನ್ನು ಸನ್ನೆಯ ತಲಕ್ಕೆ ಲಂಬಕೋನದಲ್ಲಿ ಭದ್ರಪಡಿಸಲಾಗಿದೆ. ವರ್ಜ್ ಅಥವಾ ಲಂಬ, ಉರುಳೆ ಅಥವಾ ಕ್ಷಿತಿಜೀಯ, ಡೂಪ್ಲೆ ಮತ್ತು ಕಾಲಮಾಪಿ (ಕ್ರೋನೊಮೀಟರ್) ಅಥವಾ ಕಳಚಿಕೊಳ್ಳುವಿಕೆ (ಡಿಟೆಂಟ್) ಈ ರೀತಿ ಬೇರೆ ಮಾದರಿಯ ತಪ್ಪಿಸಿಕೊಳ್ಳುವಿಕೆಗಳು ಇವೆ. ಆದರೆ ಇವೆಲ್ಲವೂ ಗಡಿಯಾರವನ್ನು ಅಭಿವೃದ್ಧಿಪಡಿಸುತ್ತಿದ್ದ ಮೊದಲ ದಿನ ಉಪಯೋಗದಲ್ಲಿದ್ದವು. ಈಗ ಇವು ಬಳಕೆಯಲ್ಲಿಲ್ಲ.
ನಿಯಂತ್ರಣಕಾರೀ ಯಂತ್ರವಿನ್ಯಾಸ (ರೆಗ್ಯುಲೇಟಿಂಗ್ ಮೆಕಾನಿಸಂ) : ಗಡಿಯಾರದ ಮುಖ್ಯ ಮೂಲಭಾಗ ನಿಯಂತ್ರಣಕಾರೀ ಯಂತ್ರವಿನ್ಯಾಸ. ಇದರಲ್ಲಿ ಒಂದು ಸಂತುಲನವನ್ನು (ಗತಿನಿಯಂತ್ರಕ ಚಕ್ರ ಸಮತೂಕದಲ್ಲಿಟ್ಟು ಇದನ್ನು ಸರ್ಪಿಲವಾಗಿ (ಸ್ಪೈರಲ್) ಸುರುಳಿಸುತ್ತಿರುವ ಸ್ಪ್ರಿಂಗಿಗೂ ಕ್ರಮಪಡಿಸುವ ವಿಧಾನಕ್ಕೂ (ನಿಯಂತ್ರಣಕಾರಿ) ಜೋಡಿಸಿದೆ. (ಚಿತ್ರ 1). ಈ ಸ್ಪ್ರಿಂಗನ್ನು ಸಾಮಾನ್ಯವಾಗಿ ರೋಮ ಸ್ಪ್ರಿಂಗ್ (ಹೇರ್ ಸ್ಪ್ರಿಂಗ್) ಎಂದು ಕರೆಯುತ್ತಾರೆ.
 ಸಂತುಲನವನ್ನು ವಿರಾಮಸ್ಥಾನದಿಂದ ಕದಲಿಸಿ ಅನಂತರ ಅದನ್ನು ಬಿಟ್ಟುಬಿಟ್ಟರೆ ಅದು ಆಂದೋಲಿಸುತ್ತದೆ. 18,000 ವಿಸ್ಪಂದನಗಳು (ಬೀಟ್ಸ್) ಇರುವ ಗಡಿಯಾರದಲ್ಲಿ, ಸಂತುಲನ ಒಂದು ಸೆಕೆಂಡಿಗೆ 5 ಅರ್ಧ ಅಂದೋಲನಗಳನ್ನು ಮಾಡುತ್ತದೆ. 
ಈ ಮೂಲ ಆವರ್ತಾಂಕ (ಫ್ರೀಕ್ವೆಸ್ಸಿ) ವ್ಯತ್ಯಾಸವಾದರೆ ಗಡಿಯಾರಕ್ಕೆ ಸರಿಯಾದ ಕಾಲವನ್ನು ತೋರಿಸುವ ಸಾಮಥ್ರ್ಯವಿರುವುದಿಲ್ಲ. ಸರಿಯಾದ ಕಾಲ ತೋರಿಸುವ ಅಥವಾ ಕ್ರಮಪಡಿಸುವ ಕೌಶಲ ಏನೆಂದರೆ ಉಷ್ಣತೆ ವ್ಯತ್ಯಾಸವಾದರೂ ಗಡಿಯಾರ ವಿವಿಧ ಸ್ಥಾನಗಳಲ್ಲಿದ್ದರೂ ಆಂದೋಲನಗಳ ಸಂಖ್ಯೆ ಸ್ಥಿರವಾಗಿರುವಂತೆ ಮಾಡುವುದು.

	ಕೀಲಿಕೊಡುವುದು ಮತ್ತು ಸರಿಪಡಿಸುವಿಕೆಗಳ ಯಂತ್ರವಿನ್ಯಾಸ : ಈ ಮಾದರಿಯ ಯಂತ್ರವಿನ್ಯಾಸಗಳಿಗೆ 1000ಕ್ಕಿಂತ ಹೆಚ್ಚು ಏಕಸ್ವಗಳನ್ನು (ಪೇಟೆಂಟ್ಸ್) ಪಡೆದುಕೊಂಡಿದ್ದಾರೆ. ಹೆಚ್ಚು ಸಂಖ್ಯೆಯ ಗಡಿಯಾರಗಳಲ್ಲಿ ಈ ಕ್ರಿಯಾವಿನ್ಯಾಸಕ್ಕೆ ಒಂದು ಶಿಷ್ಟ ಏರ್ಪಾಡನ್ನು ಕಂಡುಹಿಡಿಯಲಾಗಿದೆ. ವಿವರಣೆಯಲ್ಲಿ ಮಾತ್ರ ಕೆಲವು ವ್ಯತ್ಯಾಸಗಳಿರುತ್ತವೆ (ಚಿತ್ರ 4 ಮತ್ತು 5). ಕೀಲಿ ಕೊಡುವ ಕಾಂಡವನ್ನು ಹೊರಕ್ಕೆಳದಾಗ, ಮುಳ್ಳುಗಳನ್ನು ನಿಯಂತ್ರಿಸುವ ಚಲನೆಯ ಭಾಗವನ್ನು ತತ್‍ಕ್ಷಣವೇ ಒಂದು ಪಕ್ಷಾಂತ (ಪಿನಿಯನ್) ಕಾರ್ಯನಡೆಸುವಂತೆ ಮಾಡುತ್ತದೆ. ಅದು ಸ್ವಸ್ಥಾನದಲ್ಲಿದ್ದಾಗ ಕಾಂಡ ಪ್ರಧಾನಸ್ಪ್ರಿಂಗಿನ ತಿರುಗಿಸುವಿಕೆಯನ್ನು ಪ್ರವೃತ್ತಿಸುತ್ತದೆ. ಸನ್ನೆ, ನೊಗ (ಹಿಡಿಯುವ ಸನ್ನೆ) ವiತ್ತು ಅವುಗಳ ಸ್ಪ್ರಿಂಗುಗಳನ್ನು ಸ್ಥಾನದಲ್ಲಿ ಇಟ್ಟಾಗ ಈ ಎರಡು ಕ್ರಿಯೆಗಳನ್ನು ಮಾಡುತ್ತವೆ. ಚಲಿಸುವ ಭಾಗದಿಂದ ಕೀಲಿ ಕೊಡುವ ಕಾಂಡವನ್ನು ಹೊರಕ್ಕೆ ತೆಗೆದು ಪುನಃ ಸ್ವಸ್ಥಾನದಲ್ಲಿ ಇಡಲು ಸಾಧ್ಯವಾಗಬೇಕು. ಹೀಗೆ ಮಾಡಲು ಮುಖ ಮತ್ತು ಮುಳ್ಳುಗಳನ್ನು ತೆಗೆಯುವುದರ ಅಗತ್ಯವಿರಕೂಡದು. ಉತ್ತಮ ಗಡಿಯಾರದ ಕೀಲಿ ಕೊಡುವ ಯಂತ್ರಭಾಗದ ಕಲ್ಪನೆಯಲ್ಲಿ ಸವೆತದಿಂದ ಉಂಟಾಗುವ ಪರಿಣಾಮವನ್ನು ಸಂಪೂರ್ಣವಾಗಿ ಗಣನೆಗೆ ತೆಗೆದುಕೊಳ್ಳಬೇಕು. ಏಕೆಂದರೆ ಗಡಿಯಾರದ ಈ ಭಾಗದ ಸವೆತ ಮುಖ್ಯವಾಗಿ ಅತಿ ಹೆಚ್ಚು. ಗಡಿಯಾರ ಸರಿಯಾಗಿ ಕಾಲ ತೋರಿಸುವುದರ ಮೇಲೆ ಯಂತ್ರವಿನ್ಯಾಸದ ನೇರಪ್ರಭಾವ ಸ್ಪಷ್ಟವಾಗಿ ಇಲ್ಲದಿದ್ದರೂ ಹಿಂದಿನ ಕಾಲದ ಗಡಿಯಾರನಿರ್ಮಾಪಕರು ಹೆಚ್ಚು ಮರೆಯಲ್ಲಿ ಹುದುಗಿರುವ ಚಲಿಸುವ ಭಾಗಗಳನ್ನು ಕೂಡ ನಯವಾಗಿ ಮತ್ತು ಹೊಳಪಾಗಿರುವಂತೆ ಮಾಡಲು ಶ್ರಮಿಸುತ್ತಿದ್ದರು.

	ರತ್ನಗಳು (ಜುವೆಲ್ಸ್) : ಎಂಜನಿಯರುಗಳ ಪರಿಭಾಷೆಯಲ್ಲಿ ರತ್ನಗಳು ಎಂದರೆ ಆಧಾರಕಗಳು (ಬ್ಯಾರಿಂಗ್ಸ್) ಎಂದರ್ಥ. ಗಡಿಯಾರ ತಯಾರಿಸುವವರು ರತ್ನಗಳೆಂದರೆ ರಂಧ್ರ ಕೊರೆದು ಸರಿಯಾದ ಆಕಾರಕ್ಕೆ ರೂಪಿಸಿರುವ ಕೆಂಪು ಅಥವಾ ನೀಲ ಮಣಿಗಳು ಎಂದು ತಿಳಿದುಕೊಳ್ಳುತ್ತಾರೆ. ಇವುಗಳೊಳಗೆ ಚಲಿಸುವ ಭಾಗಗಳ ಅಕ್ಷಗಳು ತಿರುಗುತ್ತವೆ. ಸುಮಾರು ಅರುವತ್ತು ವರ್ಷಗಳ ಹಿಂದೆ ಈ ರೀತಿಯ ರತ್ನಗಳನ್ನೆಲ್ಲ ಹಿತ್ತಾಳೆಯ ಆಧಾರಕಗಳು ಮತ್ತು ಫಲಕಗಳೊಳಗೆ ಇಡುತ್ತಿದ್ದರು. (ಸೆಟ್). ಫಲಕದಲ್ಲಿ ಮಾಡಿದ ಕೆಲವು ತಗ್ಗುಗಳಲ್ಲಿ ಇವನ್ನು ನೇರವಾಗಿ ಭದ್ರಪಡಿಸಿ ಅನಂತರ ಅವುಗಳ ಮೇಲೆ ಹಿತ್ತಾಳೆಯನ್ನು ಸುತ್ತಿ ಸರಿಯಾದ ಸ್ಥಾನದಲ್ಲಿ ಜೋಡಿಸಲಾಗುತ್ತಿತ್ತು. ಒಂದಾನೊಂದು ಕಾಲದಲ್ಲಿ ಈ ರೀತಿಯ ಇಡುವಿಕೆ (ಸೆಟ್ಟಿಂಗ್) ಗಡಿಯಾರತಯಾರಿಕೆಯಲ್ಲಿ ಒಂದು ಮುಖ್ಯವಾದ ಕಾರ್ಯವಾಗಿತ್ತು. ಈಗಲಾದರೂ ರತ್ನಗಳನ್ನು ಯಂತ್ರಗಳಿಂದ ನಿರ್ಮಿಸಲು ಉತ್ತಮಪಡಿಸಿದ ವ್ಯವಸ್ಥೆಗಳಿರುವುದರಿಂದ ಅವನ್ನು ನೇರವಾಗಿ ಫಲಕ ಮತ್ತು ಆಧಾರಕಗಳೊಳಕ್ಕೆ ನುಗ್ಗಿಸುತ್ತಾರೆ. ಸೀಳಿರುವ ರತ್ನ-ಭೂತಗನ್ನಡಿಯಿಂದ ನೋಡಿದಾಗ ಸೀಳು ಕಾಣಿಸದಷ್ಟು ಸೂಕ್ಷ್ಮವಾಗಿದ್ದಾಗ ಕೂಡ ಉತ್ತಮ ತರಗತಿಯ ಗಡಿಯಾರದಲ್ಲಿ ಪ್ರವೇಶಿಸಲು ಸಾಧ್ಯವಿಲ್ಲ. ಹೆಚ್ಚು ಒಪ್ಪಾಗುವ ರತ್ನಗಳು ಕೃತಕ ಕೆಂಪುಗಳು. ಪುಡಿ ಅಲ್ಯುಮಿನವನ್ನು ಆಮ್ಲಜನಕ-ಜಲಜನಕ ಅನಿಲಗಳ ಊದುಗೊಳವೆಯ ಜ್ವಾಲೆಯಲ್ಲಿ ಕರಗಿಸಿ ಅನಂತರ ಕೆಂಪು ಕಲ್ಲಿನ ಬಣ್ಣ ಬರುವಂತೆ ಮಾಡಿ ಕೃತಕ ರತ್ನಗಳನ್ನು ತಯಾರಿಸುತ್ತಾರೆ. ಕಚ್ಚಾ ಪದಾರ್ಥಗಳಿಂದ ಅತಿ ಸಣ್ಣದಾಗುವಂತೆ ಸವೆಸಿ ಹೆಚ್ಚು ಹೊಳಪು ಬರುವಂತೆ ಮಾಡುತ್ತಾರೆ. ವಜ್ರಲೇಪಿತ ತಂತಿಗಳಿಂದ ಬೇಕಾಗುವ ಅಳತೆಗಿಂತ ಚಿಕ್ಕ ರಂಧ್ರಗಳನ್ನು ಕೊರೆದು ಅನಂತರ ಹಂತ ಹಂತವಾಗಿ ಸಾಣೆ ಹಿಡಿಯುವ ತಂತಿಯಿಂದ  ಸರಿಯಾದ ಅಳತೆಗೆ ಹಿಗ್ಗಿಸುತ್ತಾರೆ. ಅಂತಿಮವಾಗಿ, ಬೇಕಾಗಿದ್ದ ಪಕ್ಷದಲ್ಲಿ, ಘರ್ಷಣೆಯನ್ನು ಕಡಿಮೆ ಮಾಡಲು ಸಾಣೆ ಹಿಡಿಯುವ ತಂತಿಯಿಂದ ಆಲಿವ್‍ಎಣ್ಣೆ ಉಪಯೋಗಿಸಿ ಕಮಾನು ಎಳೆಯುತ್ತಾರೆ.

	ಗಡಿಯಾರದ ನಿಷ್ಕøಷ್ಟತೆಯ ಲಕ್ಷಣಗಳು : ಗಡಿಯಾರದ ಅತಿ ಮುಖ್ಯ ಲಕ್ಷಣಗಳೆಂದರೆ ದರ, ವಿವಿಧ ಸ್ಥಾನಗಳಲ್ಲಿ ಮತ್ತು ವ್ಯತ್ಯಾಸವಾಗುತ್ತಿರುವ ಉಷ್ಣತೆಯಲ್ಲಿ ಕಂಪನ ವೈಶಾಲ್ಯ ಹಾಗೂ ಸಂಗುಣಿತವಾದ್ಯ ಸಮಕಾಲತ್ವ ಮತ್ತು ಉಷ್ಣತಾ ಗುಣಾಂಕ.

	ದರ : ಶಿಷ್ಟಕಾಲದೊಂದಿಗೆ ಹೋಲಿಸಿದಾಗ ಇರುವ ಕಾಲವ್ಯತ್ಯಾಸವನ್ನು ದರ (ರೇಟ್) ಎನ್ನುತ್ತಾರೆ. ಎರಡು ಗಡಿಯಾರಗಳು ಏಕರೂಪವಾದ ಕಾಲಗಳನ್ನು ತೋರಿಸುವುದು ಏಕೆ ಅತಿ ವಿರಳವೆನ್ನುವುದನ್ನೂ ಆ ಗಡಿಯಾರಗಳ ನಡುವೆ ಅಸಂಖ್ಯಾತ ವ್ಯತ್ಯಾಸಗಳು ಹೇಗೆ ತಲೆದೋರುವುವೆಂಬುದನ್ನು ಒಂದು ಗಡಿಯಾರದ ದರದ ಮೇಲೆ ಪ್ರಭಾವ ಬೀರುವ ಅಸಾಧಾರಣ ಮತ್ತು ವಿವಿಧ ಘಟಕಗಳಿಂದ ತಿಳಿಯಬಹದು. ಗಡಿಯಾರದ ದರವನ್ನು ನಿಯಂತ್ರಿಸುವ ಭೌತಶಾಸ್ತ್ರದ ನಿಯಮಗಳನ್ನೂ ದರವನ್ನು ವ್ಯತ್ಯಾಸ ಮಾಡಬಲ್ಲ ಪ್ರಭಾವಗಳನ್ನೂ ಇಲ್ಲಿ ಸ್ಥೂಲವಾಗಿ ಉಲ್ಲೇಖಿಸಬಹುದು. ನಿರ್ದೇಶಿಸುವ ಬಲದ ವಿಭವಶಕ್ತಿಗೆ (ಪೊಟೆನ್ಯಿಯಲ್ ಎನರ್ಜಿ) ಎದುರಾಗಿ ಚಲಿಸುತ್ತಿರುವ ದ್ರವ್ಯರಾಶಿಯ ಚಲನಶಕ್ತಿಯ (ಕೈನೆಟಿಕ್ ಎನರ್ಜಿ) ವಿನಿಮಯದ ಪರಿಣಾಮವಾಗಿ ಯಾಂತ್ರಿಕೀಯ ಆಂದೋಲನ ಸಂಭವಿಸುತ್ತದೆ. ಲೊಲಕ ಗಡಿಯಾರದಲ್ಲಿ ಮೇಲಕ್ಕೇರಿಸಿದ ಲೋಲಕದ ಗುಂಡಿನ ಮೇಲೆ ಗುರುತ್ವ ಬಲದ ಪರಿಣಾಮದಿಂದ ಮತ್ತು ಸಂತುಲನ ಚಕ್ರದ ಗಡಿಯಾರದಲ್ಲಿ ರೋಮ ಸ್ಪ್ರಿಂಗಿನ ಸೆಳೆತದಿಂದ ಈ ನಿರ್ದೇರ್ಶಿಸುವ ಬಲಪ್ರತಿನಿಧಿಸಲ್ಪಡುತ್ತದೆ. ನಿರ್ದೇಶಿಸುವ ಬಲಡೋಲಾಯಮಾನ ವಸ್ತುವನ್ನು ಕೇಂದ್ರ ಸ್ಥಾನಕ್ಕೆ ಹಿಂತಿರುಗುವಂತೆ ಮಾಡಲು ಪ್ರಯತ್ನಿಸುತ್ತದೆ. ಆದರೆ ಅದರ ದ್ರವ್ಯರಾಶಿಯ ಚಲನಶಕ್ತಿ ಆ ಕೇಂದ್ರಸ್ಥಾನವನ್ನು ಮೀರಿ ಮುಂದೆ ಹೋಗುವಂತೆ ಮಾಡುತ್ತದೆ. ಚಲನ ಉತ್ಕ್ರಮಣವಾಗುವ ಬಿಂದುಗಳಲ್ಲಿ ವಿಭವಶಕ್ತಿ ಮಾತ್ರ ಇರುತ್ತದೆ. ಕೇಂದ್ರಸ್ಥಾನವನ್ನು ದಾಟುವಾಗ ಚಲನಶಕ್ತಿಯೊಂದೇ ಪ್ರವರ್ತಕವಾಗಿದೆ. ದ್ರವ್ಯರಾಶಿ ಮತ್ತು ರೇಖೀಯ ನಿರ್ದೇಶಿತ ಬಲಗಳು ಮಾತ್ರ ಕ್ರಿಯಾತ್ಮಕವಾಗಿರುವ ಆದರ್ಶ ಡೋಲಾಯಮಾನ ವ್ಯವಸ್ಥೆಗೆ ಕಟ್ಟುನಿಟ್ಟಾಗಿ ಸೈನ್ ಉತ್ಪನ್ನವಿರುವ ಸಂಗತ ಚಲನೆ ಇರುತ್ತದೆ.

	ಗಡಿಯಾರದ ಲಕ್ಷಣಗಳನ್ನು ಅಳೆಯುವಿಕೆ : ಅಳೆಯವುದು ಎಂದರೆ ಒಂದು ಶಿಷ್ಟಮಾನದೊಂದಿಗೆ ಹೋಲಿಸುವುದು ಎಂದರ್ಥ. ಕಾಲಗಣನೆಯಲ್ಲಿ ಆಗುವ ವಿಚಲನೆಗಳನ್ನು ಅಂದಾಜು ಮಾಡಲು ಆಧುನಿಕ ಕಾಲಮಾಪನÀ ತಂತ್ರಗಳಲ್ಲಿ ಎರಡು ಭಿನ್ನ ವಿಧಗಳ ಶಿಷ್ಟತೆಗಳನ್ನು (ಸ್ಟ್ಯಾಂಡಡ್ರ್ಸ್) ಉಪಯೋಗಿಸುತ್ತಾರೆ. ಮೊದಲನೆಯದು ಲೋಲಕ ಗಡಿಯಾರ ಅಥವಾ ಸೆಕೆಂಡುಗಳನ್ನು ಬಡಿಯುವ ನಿಯಂತ್ರಣಕಾರಿ. ಇದನ್ನು ಉಪಯೋಗಿಸುವವನು ತನ್ನ ಗಡಿಯಾರದ ಮುಳ್ಳುಗಳ ಸ್ಥಾನವನ್ನು ಪ್ರಧಾನ ಗಡಿಯಾರದೊಂದಿಗೆ (ಮಾಸ್ಟರ್ ಕ್ಲಾಕ್) ಹೋಲಿಸಿ ಅವುಗಳ ನಡುವಣ ವ್ಯತ್ಯಾಸವನ್ನು (ಹಿಂದು ಅಥವಾ ಮುಂದು) ಗುರುತಿಸುತ್ತಾನೆ. ಈ ವ್ಯತ್ಯಾಸವೇ ಗಡಿಯಾರದ ಸ್ಥಿತಿ (ಸ್ಟೇಟ್) ಎಂದು ಹೇಳಬಹುದು. ಮಾರನೆಯ ದಿವಸ ಅದೇ ಕಾಲದಲ್ಲಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸುವುದಲ್ಲದೆ ಇದೇ ರೀತಿ 24 ಗಂಟೆಗಳಲ್ಲೂ ಎಣಿಕೆಯನ್ನು ಮಾಡುತ್ತಾನೆ. ಎರಡು ಅನುಕ್ರಮ ದಿವಸಗಳಲ್ಲಿ ಗಡಿಯಾರದ ಸ್ಥಿತಿಗಳ ವ್ಯತ್ಯಾಸಕ್ಕೆ ದೈನಿಕ ದರ ಎಂದು ಹೆಸರು. ಇದೊಂದೇ ಗಡಿಯಾರ ನಿಷ್ಕøಷ್ಟತೆಯ ಕಲ್ಪನೆಯನ್ನು ಕೊಡುವುದಿಲ್ಲ. ಏಕೆಂದರೆ ಉತ್ತಮ ತರಗತಿಯ ಗಡಿಯಾರ ಪ್ರತಿ ದಿವಸವೂ 10 ರಿಂದ 30 ಸೆಕೆಂಡುಗಳ ವರೆಗೆ ಅವಿಚ್ಛಿನ್ನವಾಗಿ ಮುಂದೋ ಹಿಂದೋ ಹೋಗಬಹುದು.

	ದರದಲ್ಲಿನ ದೈನಿಕ ವ್ಯತ್ಯಾಸವನ್ನು ನಿರ್ಧರಿಸಲು ಉಪಯೋಗಿಸುವ ಎರಡನೆಯ ಯಂತ್ರ ಅತಿ ಆಧುನಿಕವಾದದ್ದು. ಇದಕ್ಕೆ ಕಾಲ ಸಂತುಲನ (ಟೈಂ ಬ್ಯಾಲೆನ್ಸ್) ಎಂದು ಹೆಸರು. ಈ ಯಂತ್ರಗಳು ಕಾರ್ಯ ನಡೆಸುವುದು ಎಲೆಕ್ಟ್ರಾನಿಕ್ಸ್‍ನಿಂದ. ಇವುಗಳಲ್ಲಿ ವೀಕ್ಷಣೆಗಳನ್ನು ಅತಿವೇಗದಿಂದ ಮಾಡಬಹುದು. ಅತ್ಯಂತ ಕುಶಲ ಕೆಲಸಗಾರರ ದೃಷ್ಟಿಗೂ ಬೀಳದೆ ಇರುವಂಥ ದೋಷಗಳನ್ನು ಕಂಡುಹಿಡಿದು ಇವಕ್ಕೆ ಕಾರಣಗಳನ್ನು ವಿಶ್ಲೇಷಿಸುವುದು ಇಲ್ಲಿ ಸಾಧ್ಯವಾಗುತ್ತದೆ. ಎಲೆಕ್ಟ್ರಾನಿಕ್ ಯಂತ್ರದಲ್ಲಿ ಪರೀಕ್ಷಿಸಬೇಕಾದ ಗಡಿಯಾರದ ಬಡಿತಗಳ ಆವರ್ತಾಂಕವನ್ನು ಆಂದೋಲಿಸುತ್ತಿರುವ ಬೆಣಚುಕಲ್ಲಿನ (ಕ್ವಾಟ್ರ್ಸ್) ಹರಗಳನ್ನು ಕಾಲಮಾನವಾಗಿಟ್ಟುಕೊಂಡು ಹೋಲಿಸುತ್ತಾರೆ. ಅಳೆದಂಥ ಫಲಿತಾಂಶಗಳನ್ನು ನಕ್ಷೆಯ ಮೇಲೆ ಗುರುತಿಸಿ ಇಲ್ಲವೇ ಮುಳ್ಳಿನಿಂದ ಇಲ್ಲವೇ ಒಮ್ಮೊಮ್ಮೆ ಮಿಣಕು ಸಂಜ್ಞೆಯಿಂದ ಪಡೆಯುತ್ತಾರೆ.

	ಸ್ಥಾನ ದೋಷ : ಗಡಿಯಾರವನ್ನು ವಿವಿಧ ದಿಗ್ವಿನ್ಯಾಸಗಳಲ್ಲಿ (ಓರಿಯೆಂಟೇಷನ್ಸ್) ಇಟ್ಟಾಗ ಅಳೆದ ದರದ ವ್ಯತ್ಯಾಸವೇ ಈ ದೋಷ. ಅಳತೆಗಳಿಗೆ ಉಪಯೋಗಿಸುವ ದಿಗ್ವಿನ್ಯಾಸಗಳು ಹೀಗಿವೆ: ಶಿಖರ ಕೆಳಭಾಗದಲ್ಲಿರುವುದು. ಶಿಖರ ಎಡಕ್ಕೆ, ಮುಖ ಮೇಲ್ಭಾಗವನ್ನಾಗಿ ಮಾಡುವುದು.

	ಕಂಪನ ವೈಶಾಲ್ಯ (ಆಂಪ್ಲಿಟ್ಯೂಡ್) : ಕೇಂದ್ರಸ್ಥಾನದಿಂದ ಉತ್ಕ್ರಮಣ ಬಿಂದುವೊಂದಕ್ಕೆ ಚಲಿಸುವಾಗ ಸಂತುಲನ ಚಕ್ರದ ಚಾಪಕ್ಕೆ ಈ ಹೆಸರಿದೆ. ಗಡಿಯಾರದ ದರದ ಮೇಲೆ ಪ್ರಭಾವ ಬೀರುವ ಅನೇಕ ವಸ್ತುಸ್ಥಿತಿಗಳು ಈ ವೈಶಾಲ್ಯವನ್ನು ಅವಲಂಬಿಸುತ್ತವೆ. ಆದ್ದರಿಂದ ಗಡಿಯಾರದ ದರದ ಅನಂತರ ಲಕ್ಷಣಗಳಲ್ಲಿ ಸಂತುಲನ ಚಕ್ರದ ವೈಶಾಲ್ಯ ಅತ್ಯಂತ ಮುಖ್ಯವಾದದ್ದು. ವೈಶಾಲ್ಯವನ್ನು ನಿಷ್ಕøಷ್ಟವಾಗಿ ಅಳೆಯಲು ಎಲೆಕ್ಟ್ರಾನಿಕ್ ಯಂತ್ರಗಳನ್ನು ಉಪಯೋಗಿಸುತ್ತಾರೆ.

	ಸಮಕಾಲತ್ವ (ಐಸೊಕ್ರಾನಿಸಂ) : ವಾಡಿಕೆಯ ಪ್ರಕಾರ ಚಿಕ್ಕ ವೈಶಾಲ್ಯವಿರಲಿ ಇಲ್ಲವೇ ದೊಡ್ಡ ವೈಶಾಲ್ಯವಿರಲಿ ಎಲ್ಲ ಆಂದೋಲನಗಳನ್ನು ಒಂದೇ ಸಮವಾದ ಕಾಲದಲ್ಲಿ ಮಾಡುವ ಆದರ್ಶ ಆಂದೋಲಕ ವ್ಯವಸ್ಥೆಯ ಗುಣವನ್ನು ಸಮಕಾಲತ್ವವೆಂದು ತಿಳಿಯಬಹುದು. ಆದ್ದರಿಂದ ದರ ಮತ್ತು ವೈಶಾಲ್ಯಗಳ ನಡುವಣ ಸಂಬಂಧವನ್ನು ಸಮಕಾಲತ್ವ ಉಲ್ಲೇಖಿಸುತ್ತದೆ. ಯಾವ ವ್ಯಾವಹಾರಿಕ ಆಂದೋಲನ ವ್ಯವಸ್ಥೆಯೇ ಆಗಲಿ ಯಥಾರ್ಥವಾದ ಸಮಕಾಲತ್ವವನ್ನು ತೋರಿಸುವುದಿಲ್ಲ. ಆದರ್ಶ ಸಮಕಾಲತ್ವದಿಂದ ವ್ಯತ್ಯಾಸವಾಗುವಿಕೆಗೆ ಅಸಮಕಾಲತ್ವ ಅಥವಾ ಸಮಕಾಲತ್ವದ ದೋಷವೆಂದು ಹೆಸರು. ಗಡಿಯಾರದ ಸಮಕಾಲತ್ವದ ದೋಷ ವೈಶಾಲ್ಯದ ವ್ಯತ್ಯಾಸದಿಂದ ಸಂಭವಿಸಿದ ಎಲ್ಲ ದರ ವ್ಯತ್ಯಾಸಗಳ ಮೊತ್ತ. U್ಪಡಿಯಾರದ ದಿಗ್ವಿನ್ಯಾಸದಿಂದ ಈ ದೋಷ ಉಂಟಾಗುವಂತಿದ್ದರೆ ಸಮಕಾಲತ್ವದ ದೋಷದ ಮೇಲೆ ಉಷ್ಣತೆಯ ಪರಿಣಾಮ ಕೂಡ ಇದೆಯೆಂಬುದನ್ನು ಗಮನಿಸಬೇಕು. ಸಮಕಾಲತ್ವದ ದೋಷವನ್ನು ತನಿಖೆ ಮಾಡಲು ಸಂಪೂರ್ಣವಾಗಿ ಹೊಸಮಾದರಿಯ ಎಲೆಕ್ಟ್ರಾನಿಕ್ ಉಪಕರಣವನ್ನು ಬಳಸುತ್ತಾರೆ.

	ಉಷ್ಣತಾ ಗುಣಕ : ಗಡಿಯಾರವನ್ನು ಬಳಸುವಾಗ ಅದು ಸಾಧಾರಣವಾಗಿ ಹೆಚ್ಚು ವ್ಯತ್ಯಾಸಗಳಿರುವ ಉಷ್ಣತೆಗೆ ಗುರಿಯಾಗುತ್ತದೆ. ಚಳಿಗಾಲದಲ್ಲಿ ಹಾಸಿಗೆಯ ಪಕ್ಕದ ಮೇಜದ ಮೇಲೆ ಇಟ್ಟಿರುವ ಗಡಿಯಾರ ಕೆಲವು ಪ್ರದೇಶಗಳಲ್ಲಿ ಹೆಪ್ಪುಗಟ್ಟುವ ಬಿಂದುವಿಗಿಂತ ಕೆಳಗಿರುವ ಉಷ್ಣತೆಗೆ ಒಳಪಡಬಹುದು. ಗಡಿಯಾರವನ್ನು ಸದಾ ಧರಿಸಿಕೊಂಡಿದ್ದಾಗಲೂ ಪರಿಸರದ ಉಷ್ಣತೆಯಲ್ಲಿ ತೀವ್ರ ವ್ಯತ್ಯಾಸಗಳು ಉಂಟಾಗಬಹುದು. ಸ್ವಯಂಪರಿಹಾರಕ (ಸೆಲ್ಫ ಕಾಂಪೆನ್ಸೇಟರಿ) ರೋಮಸ್ಪ್ರಿಂಗುಗಳನ್ನು ಉಪಯೋಗಿಸಿದರೂ ಬಹುಮಟ್ಟಿಗೆ ಉಷ್ಣತೆಯ ಮೇಲೆಯೇ ದರ ಇನ್ನೂ ಅವಲಂಬಿತವಾಗಿರುತ್ತದೆ. ತುಂಬ ಶಿಷ್ಟಮಟ್ಟವಿರುವ ಗಡಿಯಾರಗಳಿಗೆ ನಿವಾರೋಕ್ಸ್ ಗಿ ರೋಮಸ್ಪ್ರಿಂಗುಗಳನ್ನು ಅಳವಡಿಸುವುದುಂಟು. ಆಂದೋಲನ ಮಾಡುತ್ತಿರುವ ಸಮುದಾಯದ ಮೇಲೆ ಉಷ್ಣತೆ ಪ್ರತ್ಯಕ್ಷ ಪ್ರಭಾವ ಬೀರುವುದರ ಜೊತೆಗೆ ದರದ ಮೇಲೆ ಅಪ್ರತ್ಯಕ್ಷ ಪ್ರಭಾವವನ್ನು ಕೂಡ ಬೀರುತ್ತದೆ. ಉಷ್ಣತೆಗೆ ವ್ಯತ್ಯಾಸವಾದಂತೆಲ್ಲ ತೈಲದ ಶ್ಯಾನತೆಯೂ ವ್ಯತ್ಯಾಸಹೊಂದಿ ಅದರ ಪರಿಣಾಮವಾಗಿ ಘರ್ಷಣೆ ಮತ್ತು ವೈಶಾಲ್ಯಗಳು ವ್ಯತ್ಯಾಸವಾಗುತ್ತವೆ. ಸಮಕಾಲತ್ವದೋಷದ ಕಾರಣದಿಂದ ಇದು ಇನ್ನೂ ಹೆಚ್ಚು ದರ ವ್ಯತ್ಯಾಸಗಳನ್ನು ಉಂಟುಮಾಡುತ್ತದೆ. ಆದರೆ ಇವೆಲ್ಲ ಪರಿಹಾರಕ ಸ್ವಾಭಾವದವುಗಳು.

	ನೀರನ್ನು ಪ್ರತಿರೋಧಿಸುವ ಗಡಿಯಾರಗಳು : 20 ಮೀ. ಆಳದ ನೀರಿನಲ್ಲಿ 90 ಸೆಕೆಂಡುಗಳ ವರೆಗೆ ಮುಳುಗಿಸಿದರೂ ಕೆಡದೆ ಇರುವಂಥ ಕೈಗಡಿಯಾರಕ್ಕೆ ನೀರನ್ನು ಎದುರಿಸುವ ಸಾಮಾಥ್ರ್ಯ ಉಂಟು ಎಂದು ಇಂಡಿಯನ್ ಸ್ಟ್ಯಾಂಡಡ್ರ್ಸ್ ಆರ್ಗನೈಸೇóಷನ್ ವ್ಯಾಖ್ಯಿಸಿದೆ. ಗಡಿಯಾರಕ್ಕೆ ಇರಬಹುದಾದ, ನೀರನ್ನು ಪ್ರತಿರೋಧಿಸುವ ಸಾಮಥ್ರ್ಯವನ್ನು ಪರೀಕ್ಷಿಸಲು ಅನೇಕ ವಿಧಾನಗಳನ್ನು ಈಗ ಬಳಸುತ್ತಾರೆ. ನೀರಿನಲ್ಲಿ ಒತ್ತಡದ ಪರೀಕ್ಷೆಗಳನ್ನೂ ವಾಯುವಿನಲ್ಲಿ ಭಾಗಶಃ ನಿರ್ವಾತ ಪರೀಕ್ಷೆಗಳನ್ನೂ ನಡೆಸಲೂ ಉಪಕರಣಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಸಂಪೂರ್ಣವಾಗಿ ವಾಯುವನ್ನು ರೋಧಿಸುವ ಮತ್ತು ನೀರನ್ನು ಒಳಗೆ ಬಿಡಲಾರದಷ್ಟು ಬಿಗಿಯಾಗಿರುವ ಕೋಶ ಯಾವುದೂ ಇಲ್ಲ. ಗಾಜಿನ ಬದಲಾಗಿ ಪಾರದರ್ಶಕ ಪ್ಲಾಸ್ಟಿಕ್‍ವಸ್ತು. ಪ್ಲೆಕ್ಸಿಗ್ಲಾಸ್‍ನಂಥವನ್ನು ಬಳಸುತ್ತಾರೆ. ಆದರೆ ಪ್ರಯೋಗಶಾಲೆಗಳಲ್ಲಿ ನಡೆಸಿದ ಪರೀಕ್ಷೆಗಳಿಂದ ಈ ರೀತಿಯ ವಸ್ತುಗಳು ಹೆಚ್ಚು ಕಡಿಮೆ ಪಾರಗಮ್ಯಗಳೆಂದು (ಪರ್ಮಿಯೆಬಲ್ಸ್) ಗೊತ್ತಾಗಿದೆ. ಕಾಲ ಕಳೆದಂತೆ ಈ ವಸ್ತುಗಳು ವ್ಯತ್ಯಾಸಗಳನ್ನು ಹೊಂದುವುದರಿಂದ ಅವು ತಮ್ಮ ಸಂರಕ್ಷಣಗುಣಗಳನ್ನು ಕಳೆದುಕೊಳ್ಳುತ್ತವೆ.

	ಧಕ್ಕಾ ಪ್ರತಿರೋಧನ (ಷಾಕ್ ರೆಸಿಸ್ಟೆನ್ಸ್) : ಸಂತುಲನದ ಗೂಟದ ಕೀಲಕಗಳು ರೋಮದ ಗಾತ್ರಕ್ಕೆ ಸರಿಸಮವಾಗಿ ಅಥವಾ ಅದಕ್ಕಿಂತ ಸ್ವಲ್ಪ ದೊಡ್ಡದಾಗಿರುತ್ತವೆ. ಧಕ್ಕೆ ಒದಗಿದಾಗ ಅಥವಾ ಗಡಿಯಾರ ಕೆಳಕ್ಕೆ ಬಿದ್ದ ಸಂದರ್ಭಗಳಲ್ಲಿ ಚಲಿಸುವ ಈ ಭಾಗವೇ ಅಪಾಯಕ್ಕೊಳಗಾಗುತ್ತದೆ. ಅತಿ ಪ್ರಬಲವಾದ ಧಕ್ಕೆ ಪಡೆದಾಗ ಕೂಡ ಗಡಿಯಾರವನ್ನು ಪರಿಣಾಮಕಾರಿಯಾಗಿ ರಕ್ಷಿಸುವಂಥ ಅನೇಕ ಧಕ್ಕಾ ಪ್ರತಿರೋಧಕ ವಿಧಾನಗಳ ವ್ಯವಸ್ಥೆಗಳನ್ನು ಪರಿಶೋಧಿಸಿದ್ದಾರೆ.

	ಗಡಿಯಾರದ ಮೇಲೆ ಕಾಂತತ್ವದ ಪರಿಣಾಮ : ಗಡಿಯಾರ ಸಂಪೂರ್ಣವಾಗಿ ಕಾಂತೀಕರಿಸಲ್ಪಡುವುದಿಲ್ಲ. ಅದರಲ್ಲಿರುವ ಪ್ರಧಾನ ಸ್ಟ್ರಿಂಗ್, ಕೀಲಿಕೊಡುವ ಯಂತ್ರ ವಿನ್ಯಾಸ, ನಿಯಂತ್ರಣಕಾರಿಯ ಸ್ಕ್ರೂಮೊಳೆಗಳು, ತಪ್ಪಿಸಿಕೊಳ್ಳುವಿಕೆ ಮತ್ತು ಸಂತುಲನ ಇವನ್ನು ಒಳಗೊಂಡಿರುವ ಉಕ್ಕಿನ ಭಾಗಗಳು ಮಾತ್ರ ಇದಕ್ಕೆ ಒಳಪಡುತ್ತವೆ. ಗಡಿಯಾರದ ಮೇಲೆ ಕಾಂತತ್ವದಿಂದ ಆಗುವ ಪರಿಣಾಮವನ್ನು ಊಹಿಸುವುದು ಕಷ್ಟವೇನಲ್ಲ. ಗಡಿಯಾರದ ದರದ ಮೇಲೆ ಕಾಂತತ್ವ ಎರಡು ಮುಖ್ಯವಾದ ಪರಿಣಾಮಗಳನ್ನು ಬೀರುತ್ತದೆ. ಮೊದಲನೆಯದು ಅಲ್ಪಕಾಲದ ಪರಿಣಾಮ. ಇದು ಗಡಿಯಾರ ಕಾಂತ ಕ್ಷೇತ್ರದ ಸಮೀಪಕ್ಕೆ ಬಂದಾಗ, ಉದಾಹರಣೆಗೆ ತೀಕ್ಷ್ಣವಾದ ಕಾಂತದ ಧ್ರುವಗಳಿಂದ ಒಂದು ಅಥವಾ ಎರಡು ಸೆಂ.ಮೀ. ನೊಳಗೆ ಬಂದಾಗ, ಸಂಭವಿಸುವ ಪರಿಣಾಮ ಹೀಗಾದಾಗ ಗಡಿಯಾರ ಬಹುಶಃ 30 ಅಥವಾ 40 ಗೌಸ್ ಕ್ಷೇತ್ರದೊಳಗೆ ಇಟ್ಟಹಾಗಾಗುತ್ತದೆ. ರೂಢಿಯಲ್ಲಿ ಒಂದು ಗಡಿಯಾರ ಗುರಿಪಡಿಸಲ್ಪಡಬಹುದಾದ ಅತ್ಯಂತ ತೀಕ್ಷ್ಣವಾದ ಕ್ಷೇತ್ರ ಇದೇ. ದ್ವಿಲೋಹರಚಿತ (ಉಕ್ಕು ಮತ್ತು ಹಿತ್ತಾಳೆ) ಸಂತುಲನ ಮತ್ತು ಉಕ್ಕಿನಿಂದ ಮಾಡಿದ ಸಂತುಲನ ಸ್ಪ್ರಿಂಗ್ ಇರುವ ಒಂದು ಗಡಿಯಾರ ಈ ಕ್ಷೇತ್ರದಲ್ಲಿ ನಿಂತೇ ಹೋಗುತ್ತದೆ. ಇದಕ್ಕಿಂತ ದುರ್ಬಲ ಕ್ಷೇತ್ರದಲ್ಲಿ (ಸುಮಾರು 10 ಗೌಸ್) ಗಡಿಯಾರ ಹೆಚ್ಚು ವ್ಯತ್ಯಾಸಗಳನ್ನು ತೋರಿಸುತ್ತದೆ. ಬಹುಶಃ 24 ಗಂಟೆಗಳಲ್ಲಿ 500 ರಿಂದ 800 ಸೆಕೆಂಡುಗಳಷ್ಟು ಮುಂದೆ ಹೋಗಬಹುದು. ಕ್ಷೇತ್ರದಿಂದ ಹೊರಕ್ಕೆ ತೆಗೆದುಕೊಂಡು ಹೋದಮೇಲೆ ಗಡಿಯಾರ ಸ್ವಲ್ಪ ಮಟ್ಟಿಗೆ ಕಾಂತತ್ವವನ್ನು ಉಳಿಸಿಕೊಂಡಿರುತ್ತದೆ. ಇದು ಗೌಣ. ಈ ಉಳಿಕೆಯ ಪರಿಣಾಮ ಉಳಿದೇ ಹೋಗುವುದರಿಂದ ಗಡಿಯಾರ ಸಾಮಾನ್ಯವಾಗಿ ಹಿಂದೆಹೋಗುತ್ತಲೆ ಇರುತ್ತದೆ. ಗಡಿಯಾರದ ಭಾಗಗಳನ್ನು ಕಾಂತೀಕರಣವಾಗದ ಮಿಶ್ರಲೋಹಗಳಿಂದಾಗಲಿ ಕಾಂತತ್ವದಿಂದ ಪರಿಣಾಮ ಹೊಂದದಿರುವ ಮಿಶ್ರಲೋಹಗಳಿಂದಾಗಲಿ ತಯಾರು ಮಾಡುವುದೇ ಇಲ್ಲಿ ಬಹು ಸರಳವಾದ ಪರಿಹಾರ. ಇದು ಸಂತುಲನ, ಸಂತುಲನ ಸ್ಪ್ರಿಂಗ್ ಮತ್ತು ಕೆಲವು ಸಂದರ್ಭಗಳಲ್ಲಿ ಸನ್ನೆ ಹಾಗೂ ಪ್ಯಾಲೆಟುಗಳಿಗೆ ಅನ್ವಯಿಸುತ್ತದೆ. ಬೆರಿಲಿಯಂ ತಾಮ್ರ ಹಿತ್ತಾಳೆ ಅಥವಾ ನಿವೋರಾಕ್ಸ್‍ನಂಥ ಪರಿಹಾರಕ ಸ್ಪ್ರಿಂಗುಗಳೊಡನೆ ಸಂಗುಣಿತವಾದ ಜರ್ಮನ್ ಸಿಲ್ವರ್ ಇವೇ ಮುಂತಾದ ಮಿಶ್ರಲೋಹದಿಂದ ಸಂತುಲನವನ್ನು ತಯಾರುಮಾಡಬಹುದು. ಚಲನೆಯ ಭಾಗವನ್ನು ಮೃದುಕಬ್ಬಿಣ ಅಥವಾ ಸ್ಟೇನ್‍ಲೆಸ್ ಉಕ್ಕಿನಂಥ ವಸ್ತುವಿನಿಂದ ಮಾಡಿದ ಕೋಶ ದೊಳಗೆ ಹುದುಗಿಸಿ ಕೂಡ ಕಾಂತತ್ವದ ಪರಿಣಾಮವನ್ನು ತಪ್ಪಿಸಬಹುದು. ಒಂದು ಅರ್ಥದಲ್ಲಿ, ಕೋಶ (ಕೇಸ್) ಕಾಂತಕ್ಷೇತ್ರವನ್ನು ಶೋಷಿಸುವುದರಿಂದ, ಚಲನೆಗೆ ಸಂರಕ್ಷಣಾ ತೆರೆಯೊಂದನ್ನು ರೂಪಿಸುತ್ತದೆ.

	ಕೈ ಗಡಿಯಾರಗಳ ಮಾದರಿಗಳು : ಕಾಲಲೇಖಿಗಳು (ಕ್ರೋನೋಗ್ರಾಫ್ಸ್) : ಕಾಲಲೇಖಿ ಒಂದು ಸಂಪೂರ್ಣ ಗಡಿಯಾರ. ಇದು ವ್ಯವಸ್ಥಿತ ಕಾಲದ ವರೆಗೂ ನಡೆಯುತ್ತದೆ. ಇದರಲ್ಲಿ ಗಂಟೆಗಳನ್ನು, ಮಿನಿಟುಗಳನ್ನು, ಸೆಕೆಂಡುಗಳನ್ನು ಮತ್ತು ಸೆಕೆಂಡುಗಳ ಭಿನ್ನಾಂಶಗಳನ್ನು ಅಳೆಯಲು ಯಂತ್ರಭಾಗಗಳನ್ನು ಅಳವಡಿಸುತ್ತಾರೆ. ಸೆಕೆಂಡ್ ಮತ್ತು ಅದರ ಭಿನ್ನಾಂಶಗಳನ್ನು ಒಂದು ಉದ್ದವಾದ ಸೆಕೆಂಡ್ ಮುಳ್ಳು ತೋರಿಸುತ್ತದೆ. ಈ ಮುಳ್ಳನ್ನು ಚಲಿಸುವಂತೆ ಮಾಡಬಹುದು, ನಿಲ್ಲಿಸಬಹುದು ಮತ್ತು ಅದರ ಪ್ರಾರಂಭಿಕ ಸೊನ್ನೆ ಸ್ಥಿತಿಗೆ ಹಿಂದಕ್ಕೆ ತರಬಹುದು. ಸೆಕೆಂಡುಗಳನ್ನು ಭಾಗಮಾಡಿರುವ ಕಾಲಲೇಖಿಗಳಲ್ಲಿ ಎರಡು ಕಾಲಲೇಖೀ ಸೆಕೆಂಡ್ ಮುಳ್ಳಗಳಿವೆ. ಇವೆರಡೂ ಒಟ್ಟಿಗೆ ಪ್ರಾರಂಭಿಸುತ್ತವೆ. ಅವುಗಳಲ್ಲಿ ಒಂದನ್ನು ನಿಲ್ಲಿಸಿ ಓದಿಕೆಯನ್ನು ತೆಗೆದುಕೊಂಡು ಆಮೇಲೆ ಇನ್ನೊಂದನ್ನು ಅನುಸರಿಸಿ ಹೋಗುವಂತೆ ಮಾಡಬಹುದು. ಕಾಲಲೇಖೀಯ ಯಂತ್ರಭಾಗಗಳನ್ನು ಕೈಗಡಿಯಾರಕ್ಕೂ ಉಪಯುಕ್ತವಾಗುವಂತೆ ವ್ಯತ್ಯಾಸಮಾಡಲಾಗಿದೆ. ಜನಸಾಮಾನ್ಯರ ಮನಸ್ಸಿನಲ್ಲಿ ಕಾಲಲೇಖೀ ಹೆಚ್ಚು ಕಡಿಮೆ ಕಾಲಮಾಪಿಗೆ (ಕ್ರೋನೋಮೀಟರ್) ಪರ್ಯಾಯ ಎಂಬ ಭಾವ ಉಂಟು. ಇದು ಸ್ವಲ್ಪ ಗೊಂದಲಕ್ಕೆ ಕಾರಣವಾಗುತ್ತದೆ. ನಿಷ್ಕøಷ್ಟ ಗಡಿಯಾರಕ್ಕೆ ಕಾಲಮಾಪಿಯೆಂದು ಹೆಸರು. ಇದನ್ನು ಅನೇಕ ರೀತಿಯ ಪರೀಕ್ಷೆಗಳಿಗೆ ಗುರಿಪಡಿಸಿ ಕಾಲಮಾಪೀ ವೀಕ್ಷಣಾಲಯ ಅಥವಾ ಗಡಿಯಾರದ ನಿರ್ಧರಿಸುವ ಕಾರ್ಯಲಯದಲ್ಲಿ ಇದಕ್ಕೆ ಒಂದು ಯೋಗ್ಯತಾಪತ್ರವನ್ನು ನೀಡುತ್ತಾರೆ. ಸಾಮಾನ್ಯವಾದ ನಿಲ್ಗಡಿಯಾರದಲ್ಲಿ (ಸ್ಟಾಪ್‍ವಾಚ್) ಸರಳಗೊಳಿಸಿರುವ ಯಂತ್ರಭಾಗವಿದೆ. ಇದು ಕೂಡ ಸಾಮಾನ್ಯ ಕಾಲದ ಅಂತರವನ್ನು ಅಳೆಯುತ್ತದೆ. ಆದರೆ ಸಂತುಲನವನ್ನು ಆರಂಭಿಸುವುದರಿಂದ ಚಲನೆಯನ್ನು ಆರಂಭಿಸುವ ಮತ್ತು ನಿಲ್ಲಿಸುವ ಕಾರ್ಯಗಳನ್ನು ನೇರವಾಗಿ ಮಾಡಬಹುದು. ನಿಲ್ಗಡಿಯಾರ ಮಾಡುವ ಕಾರ್ಯಗಳಿಗೆ ಕಾಲಲೇಖಿಯಷ್ಟು ಹೆಚ್ಚು ಬೆಲೆಯ ಪದಾರ್ಥಗಳನ್ನು ಉಪಯೋಗಿಸುವ ಅಗತ್ಯವಿಲ್ಲ. ನಿಲ್ಗಡಿಯಾರ ಮತ್ತು ಕಾಲಲೇಖಿಗಳ ನಡುವೆ ಸಾರಭೂತವಾದ ವ್ಯತ್ಯಾಸವಿಷ್ಟೆ : ನಿಲ್ಗಡಿಯಾರವನ್ನು ನಿಲ್ಲಿಸಿದಾಗ ಮುಂದೆ ಅದು ಏನು ಸೂಚನೆಗಳನ್ನು ಕೊಡುವುದಿಲ್ಲ ; ಆದರೆ ಕಾಲಲೇಖಿ ಸಾಧಾರಣವಾದ ಮುಳ್ಳುಗಳಿಂದ ಕಾಲವನ್ನು ತೋರಿಸುತ್ತ ಮುಂದುವರಿಯುತ್ತದೆ. 		(ನೋಡಿ- ಕಾಲಲೇಖಿ-ಮತ್ತು-ಕಾಲಮಾಪಿ)          

	ಸ್ವಯಂ ಕೀಲಿ ಕೊಟ್ಟು ಕೊಳ್ಳುವ ಗಡಿಯಾರ : ಕೆಲವೇ ಗ್ರಾಮುಗಳಷ್ಟು ತೂಕದ ಒಂದು ಕಿರಿಯ ತೂಕ ಈ ಗಡಿಯಾರಕ್ಕೆ ಲಗತ್ತಾಗಿರುವುದು. ಇದರಲ್ಲಿ ಒಂದು ತೆಳುವಾದ ತಟ್ಟೆ ಅಳವಡಿಸಲಾಗಿದೆ. ಈ ತಟ್ಟೆ ಆಧಾರಕಗಳ ರಂಧ್ರಗಳಲ್ಲಿ ಚಲನಭಾಗಗಳ ನೇರ ಮೇಲೆ ಮುಕ್ತವಾಗಿ ಆಂದೋಲಿಸುತ್ತ ಕಾರ್ಯ ನಡೆಸುತ್ತದೆ. ಇದೇ ಸ್ವಯಂ ಕೀಲಿಕೊಟ್ಟುಕೊಳ್ಳುವ ಗಡಿಯಾರದ ಕ್ರಿಯಾವಿನ್ಯಾಸ. ತೋಳನ್ನು ಅತ್ಯಲ್ಪವಾಗಿ ಅಲುಗಾಡಿಸಿದರೂ ಈ ತೂಕ ಆಂದೋಲಿಸುತ್ತದೆ ಇಲ್ಲವೇ ತಿರುಗುತ್ತದೆ. ಗಿಯರು ಚಕ್ರಗಳ ಸಮುದಾಯದಿಂದ ಈ ಚಲನೆ ಉರುಳೆ ಅರ್ಬರಿಗೆ ವರ್ಗಾಯಿಸಲ್ಪಟ್ಟು ಅಲ್ಲಿಂದ ಗಡಿಯಾರದ ಪ್ರಧಾನ ಸ್ಪ್ರಿಂಗಿಗೆ ತಲುಪುತ್ತದೆ. ಗಡಿಯಾರವನ್ನು ಧರಿಸಿರುವವನ ತೋಳಿನ ಪ್ರತಿಯೊಂದು ಚಲನೆಯಿಂದಲೂ ಪ್ರಧಾನ ಸ್ಪ್ರಿಂಗ್ ನಿಧಾನವಾಗಿ, ಆದರೆ ಖಂಡಿತವಾಗಿ, ಸುತ್ತಿಕೊಳ್ಳುತ್ತ ಹೋಗುತ್ತದೆ. ಅದು ಸಂಪೂರ್ಣವಾಗಿ ಸುತ್ತಿಕೊಂಡ ಮೇಲೆ ಒಂದು ಬುದ್ಧಿವಂತಿಕೆಯ ಹಂಚಿಕೆಯಿಂದ ಅದು ಉರುಳೆಯೊಳಕ್ಕೆ ಸುತ್ತಿಕೊಳ್ಳುವಂತೆ ಮಾಡುತ್ತದೆ. ಹೀಗಾಗುವುದರಿಂದ ಪ್ರತಿನಿತ್ಯ ಗಡಿಯಾರಕ್ಕೆ ಕೀಲಿಕೊಡುವ ಅವಶ್ಯಕತೆ ಇಲ್ಲ. ಈ ಗಡಿಯಾರಗಳಲ್ಲಿ, ಕಡೇ ಪಕ್ಷ ಹಗಲಿನಲ್ಲಾದರೂ, ಪ್ರಧಾನಸ್ಪ್ರಿಂಗ್ ಹೆಚ್ಚು ಕಡಿಮೆ ಸಂಪೂರ್ಣವಾಗಿ ಸುತ್ತಿರುತ್ತದೆ. ಇದು ಗಡಿಯಾರ ಕಾಲವನ್ನು ತೋರಿಸುವುದನ್ನು ಉತ್ತಮಗೊಳಿಸುತ್ತದೆ. ಏಕೆಂದರೆ ಇದು ಸಂತುಲನದ ವೈಶಾಲ್ಯವನ್ನು ಅತ್ಯಂತ ಅಲ್ಪವಾಗಿರುವಂತೆ ಪೋಷಿಸುತ್ತದೆ. ಸ್ವಯಂ ಕೀಲಿ ಗಡಿಯಾರಕ್ಕೆ ಒಂದು ಶಿಖರ ಮತ್ತು ಗೂಟಗಳನ್ನು ಸಹ ಅಳವಡಿಸಲಾಗಿದೆ. ಇವುಗಳಿಂದ ಮುಳ್ಳುಗಳನ್ನು ತಿರುಗಿಸಬಹುದು.

	ಅಲಾರಂ ಹೊಡೆಯುವ ಕೈಗಡಿಯಾರ : 
ಕೈಗಡಿಯಾರದೊಳಗೆ ಇರುವ ಸ್ಥಳಾವಕಾಶ ಅತ್ಯಲ್ಪ. ಇದರಲ್ಲಿ ಗಂಟೆ ಬಾರಿಸುವ ಸಾಧನ ಅಂದರೆ ಗಂಟೆ ಮತ್ತು ಕೊಡತಿ ಇವನ್ನು ಜೋಡಿಸುವುದು ಕಷ್ಟ.. ಆದರೂ ಆಧುನಿಕ ಕೈಗಡಿಯಾರಗಳಿಗೆ ಅಲಾರಂ ಯಂತ್ರವಿನ್ಯಾಸವನ್ನು ಸಹ ಪೋಣಿಸುವುದು ಸಾಧ್ಯವಾಗಿದೆ. ಇದರ ಸಮಸ್ಯೆಗಳನ್ನು ನಿಭಾಯಿಸಲು ಅನೇಕ ಪರಿಹಾರಗಳನ್ನು ಕಂಡು ಹಿಡಿದಿದ್ದಾರೆ. ಅವುಗಳಲ್ಲಿ ಸ್ಪರ್ಶೇಂದ್ರಿಯದ ಪ್ರಯೋಜನವನ್ನು ಉದಾರಿಸಬಹುದು. ಮುಂಗೈಯನ್ನು ಮುಚ್ಚಿಕೊಂಡಿರುವ ಕೋಶದ ಹಿಂಭಾಗದಲ್ಲಿ ಮುಂದಕ್ಕೆ ಚಾಚಿಕೊಂಡಿರುವ ಸ್ವಲ್ಪಮಟ್ಟಿಗೆ ಚೂಪಾಗಿರುವ ಗುಂಡಿ ಅಥವಾ ಸಣ್ಣ ಇಕ್ಕಳ ಇವು ಅಲಾರಂ ಬಿಡುಗಡೆಯಾದಾಗ ಚಲಿಸಲು ಉಪಕ್ರಮಿಸುತ್ತವೆ. ಚರ್ಮದೊಂದಿಗೆ ಸಂಪರ್ಕ ಹೊಂದಿರುವ ಇಕ್ಕಳ ಅಥವಾ ಗುಂಡಿಯ ಚಲನೆ ಗಡಿಯಾರವನ್ನು ಕಟ್ಟಿಕೊಂಡವನಿಗೆ ಎಚ್ಚರಿಕೆ ನೀಡುತ್ತವೆ. ಇದು ಅಲಾರಮಿನ ಕೆಲಸವನ್ನೇ ಮಾಡಿದಂತಾಯಿತು. ಆದರೆ ಈ ತರಹದವುಗಳು ಅಷ್ಟೇನೂ ಫಲಕಾರಿಯಾಗಿಲ್ಲ. ಬೇರೆ ಮಾದರಿಯವುಗಳನ್ನು ನಿರ್ಮಿಸಿದ್ದಾರೆ. ಈ ರೀತಿಯವುಗಳಲ್ಲಿ ಝೇಂಕಾರ ಮಾಡುವಂಥವು ಜನಪ್ರಿಯವಾಗಿವೆ. ಇಂಥ ಒಂದು ಸಾಂಪ್ರದಾಯಿಕ ಗಡಿಯಾರದಲ್ಲಿ ಇರುವ ಭಾಗಗಳಿವು : ಶಕ್ತಿ ಆಕರ, ಎಲೆಕ್ಟ್ರಾನಿಕ್ ಸಂರಕ್ಷಕ ಮಂಡಲ, ಆಂದೋಳಕ (ರೋಮ ಸ್ಪ್ರಿಂಗ್ ಸಮೇತ ಸಂತುಲನ) ಮತ್ತು ಎಣಿಸುವ ಹಾಗೂ ಸೂಚಿಸುವ ಯಾಂತ್ರಿಕ ವ್ಯವಸ್ಥೆ ; ತಾರೀಖುಪಟ್ಟಿಗೆ ಬೇಕಾದ ಯಾಂತ್ರಿಕ ವ್ಯವಸ್ಥೆ ಸಹ ಇರಬಹುದು.

	ಎಲೆಕ್ಟ್ರಾನಿಕ್ ಶ್ರುತಿ-ಕವಲು ಗಡಿಯಾರ : ಇದರಲ್ಲಿ ಸಂತುಲನವೇ ಇರುವುದಿಲ್ಲ. ಒಂದು ಶ್ರುತಿಕವಲನ್ನು (ಟ್ಯೂನಿಂಗ್ ಫೋರ್ಕ್) ಅನುನಾದಕವಾಗಿ (ರೆಸೊನೇಟರ್) ಇಲ್ಲಿ ಉಪಯೋಗಿಸಿದೆ. ಆದರೆ ಈ ಶ್ರುತಿ-ಕವಲು ಬಳಕೆಯಲ್ಲಿರುವ ಸರಳವಾದ ಕವಲಿನಂತಿಲ್ಲ. ಇದರ ರಚನೆ ಹೆಚ್ಚು ಜಟಿಲವಾದ್ದು. ಇದನ್ನು ದಿಕ್ಪಲ್ಲಟ (ಡಿಫ್ಲೆಕ್ಷನ್) ಅನುವಾದಕನೆಂದು ಕರೆಯುವುದು ಹೆಚ್ಚು ಸಮಂಜಸ. ಇದು ಚಲಿಸುವ ಅಂಗವಾಗಿಯೂ ಕೆಲಸ ಮಾಡುತ್ತದೆ. ಎಲೆಕ್ಟ್ರಾನಿಕ್ ಮಂಡಲವೊಂದು ಶ್ರುತಿ-ಕವಲಿನ ಆಂದೋಲನಗಳನ್ನು ಪೋಷಿಸುತ್ತದೆ. ಶಕ್ತಿಯ ಒಂದು ಸಣ್ಣ ಕೋಶ.

	ಈ ಮಾದರಿಯ ಗಡಿಯಾರದ ಕಾರ್ಯರೂಪದ ನಕ್ಷೆ ಮುಂದೆ ಬರೆದಂತಿದೆ.
		ಶಕ್ತಿಯ ಆಕರ
		  (ಕೋಶ)
		    (		
		ಪೋಷಿಸುವ ಅಂಗ
		(ಎಲೆಕ್ಟ್ರಾನಿಕ್ ಪೋಷಣ ಮಂಡಲ)
		    (	
		ವಿದ್ಯುತ್ ಗತಿಕ ಟ್ರಾನ್ಸ್‍ಡ್ಯೂಸರ್
		(ಸುರಳಿಗಳು ಮತ್ತು ಕಾಂತಗಳು)
		     (	
		ಅನುವಾದಕ ಮತ್ತು ಚಾಲಕ (ಮೋಟಾರ್)
			(ಶ್ರುತಿ-ಕವಲು)			   ಕಾಲವನ್ನು ಕ್ರಮಪಡಿಸುವಿಕೆ
			(						(	
		ಎಣಿಸುವ ಅಂಗ                             ಸೂಚಕ ಅಂಗ
		(ಟಿಕ್ ಟಿಕ್ ಶಬ್ದಗಳು, ಎಣಿಕೆ ಚಕ್ರ    ( (ಮುಳ್ಳುಗಳು, ಮುಖ, ತಾರೀಖು                   
                 ಮತ್ತು ಸಾಲು)		                ಕಿಂಡಿಯೊಡನೆ)                                       
				                               (
                                                    ತಾರೀಖನ್ನು ಕ್ರಮಪಡಿಸುವಿಕೆ
	ಎಲೆಕ್ಟ್ರಾನಿಕ್ ಪೋಷಣ ಮಂಡಲ (ಮೇಂಟೆನೆನ್ಸ್ ಸಕ್ರ್ಯೂಟ್) ಮತ್ತು ಯಾಂತ್ರಿಕ ಅನುನಾದಕಗಳ ನಡುವಣ ಸಂಬಂಧ ವಿದ್ಯುದ್ಗತಿಕ (ಎಲೆಕ್ಟ್ರೊಡೈನಮಿಕ್) ಟ್ರ್ಯಾನ್ಸ್‍ಡ್ಯೂಸರಿನಿಂದ ಕಲ್ಪಿಸಿದೆ. ಎಣಿಕೆಯ ಅಂಗ ಶ್ರುತಿ-ಕವಲಿನ ಸಮಾನ ಉದ್ದದ ಕಂಪನಗಳನ್ನು ಎಣಿಸುತ್ತದೆಯಲ್ಲದೆ ಈ ಸಂಖ್ಯೆಯನ್ನು ಗಂಟೆಗಳು, ಮಿನಿಟುಗಳು ಮತ್ತು ಸೆಕೆಂಡುಗಳಾಗಿ ಮಾರ್ಪಾಡಿಸುತ್ತದೆ. ಈ ಸಮೂಹದಲ್ಲಿ ಪಂಚಾಂಗದ ಯಂತ್ರವಿನ್ಯಾಸವೂ ಉಂಟು.

	ಎಲೆಕ್ಟ್ರಾನಿಕ್ ಬೆಣಚುಕಲ್ಲು ಗಡಿಯಾರ : ಸಂದು ಹೋಗುವ ಕಾಲವನ್ನು ಅಳೆಯಲು ನಾವು ಅದನ್ನು ಸಮವಾದ ಅಂತರಗಳಾಗಿ ವಿಭಾಗಿಸಿ ಅವನ್ನು ಗೊತ್ತಾದ ಪ್ರಾರಂಭ ಬಿಂದುವಿನಿಂದ ಎಣಿಕೆ ಮಾಡುತ್ತೇವೆ (ನಡುಹಗಲು ಅಥವಾ ಮಧ್ಯರಾತ್ರಿ). ಪ್ರತಿಯೊಂದು ಗಡಿಯಾರದಲ್ಲಿಯ ಕಾಲವನ್ನು ಭಾಗಮಾಡವ ಅಂಗವಿದೆ. ಇದರ ಜೊತೆಗೆ ಅಂತರಗಳನ್ನು ವಿಭಾಗಿಸುವ ಇನ್ನೊಂದು ಉಪಕರಣವೂ ಉಂಟು. ಹೀಗಾಗಿ ಕಾಲ ಮುಳ್ಳುಗಳ ಮೂಲಕ ಮುಖದ ಮೇಲೆ ಪ್ರದರ್ಶಿತವಾಗುತ್ತದೆ. ಕಾಲವನ್ನು ವಿಭಾಗಿಸುವ ಅಂಗವೇ ಅನುನಾದಕ ; ಅಂದೋಲಿಸುವ ದರವೇ ಅದರ ಆವರ್ತಾಂಕ (ಫ್ರೀಕ್ವೆನ್ಸಿ) ಅನುನಾದಕದ ಗುಣಮಟ್ಟ ಏರಿದಷ್ಟು ಗಡಿಯಾರದ ದರ ಹೆಚ್ಚು ಯಥಾರ್ಥವಾಗುತ್ತದೆ. ಪರಮಾಣುವೊಂದನ್ನು ಬಿಟ್ಟರೆ ಬೇರೆ ಯಾವ ಅನುವಾದಕ್ಕೂ ಬೆಣಚುಕಲ್ಲಿನಷ್ಟು ಗುಣಮಟ್ಟ ಉನ್ನತವಾಗಿಲ್ಲ.

1 ಕೋಶ-ಶಕ್ತಿಯ ಆಕರ, 2 ಕ್ವಾಟ್ರ್ಸ್ ಪೋಷಕ ಮಂಡಲ, ಕೋಶದಿಂದ ಕ್ವಾಟ್ರ್ಸಿಗೆ ಶಕ್ತಿಪೂರೈಕೆ ಆಗುವುದರಿಂದ ಕ್ವಾಟ್ರ್ಸ್ ಪೋಷಕ ಮಂಡಲ, ಕೋಶದಿಂದ ಕ್ವಾಟ್ರ್ಸಿಗೆ ಶಕ್ತಿ ಪೂರೈಕೆ ಆಗುವುದರಿಂದ ಕ್ವಾಟ್ರ್ಸ್ ಕಂಪಿಸುವುದು,  3 ಕ್ವಾಟ್ರ್ಸ್. ಇದನ್ನು ನಿರ್ವಾತ ಹಾಗೂ ಮೊಹರು ಮಾಡಿದ ಕವಚದೊಳಗೆ ಇಡಲಾಗಿದೆ. ದಕ್ಕೆಯಿಂದ ಪ್ರಭಾವಿತವಾಗದಿರಲು ಕ್ವಾಟ್ರ್ಸ್‍ನ್ನು ಪುಟಿತ ದಾರದಿಂದ ತೂಗಿದೆ. 4 ಕ್ವಾಟ್ರ್ಸ್ ಕಂಪನದಅವರ್ತಾಂಕ 8.192 ಊz, 5 ಈ ಕಂಪನವನ್ನು ಒಂದು ಫ್ರೀಕ್ವೆನ್ಸಿ ಡಿವೈಸರ್ ಸಕ್ರ್ಯೂಟಿನಿಂದ ಕಡಿಮೆ ಮಾಡಲಾಗುತ್ತದೆ. 6 ಈ ಫ್ರೀಕ್ವೆನ್ಸಿ ಸಕ್ರ್ಯೂಟಿನಿಂದ ಹೊರಬರುವಾಗ ಆವರ್ತಾಂಕ ಕೇವಲ 258 ಊz ಇದನ್ನು ಒಂದು ಕಮಾಂಡ್ ಸಕ್ರ್ಯೂಟ್ ಮೂಲಕ (7ಕ್ಕೆ) ವರ್ಗಾಯಿಸಲಾಗುವುದು, 7 ಅನುನಾದೀ ಸೂಕ್ಷ್ಮ ಮೋಟರ್ (ರೆಸೊನೇಟಿಂಗ್ ಮೈಕ್ರೊಮೋಟರ್). ಇದರಲ್ಲಿನ ತಂತಿಯ ದಪ್ಪ 1/50 ಮಿ.ಮೀ. (ಮನುಷ್ಯರೋಮ 7/100 ಮಿ.ಮೀ.), 8 ಕಂಪನಗಳನ್ನು ಮೋಟರಿನಿಂದ 256-ಹಲ್ಲುಗಳಿರುವ ಮತ್ತು ಒಂದು ಸೆಕೆಂಡಿನಲ್ಲಿ ಒಂದು ಪೂರ್ಣ ಸುತ್ತನ್ನು ಪೂರೈಸುವ ಚಕ್ರಕ್ಕೆ ವರ್ಗಾಯಿಸಲಾಗುವುದು, 9 ಅತಿವೇಗದ ಈ ಆವರ್ತನೆಗಳನ್ನು ಮುಳ್ಳುಗಳನ್ನೂ ನಡೆಸುವ ಒಂದು ಗಿಯರು ಸಮುದಾಯ ಮಂದಗೊಳಿಸುತ್ತದೆ. ಕಾಲ ಹಾಗೂ ತಾರೀಖು ಸರಿಪಡಿಸುವಿಕೆಯನ್ನು ನಿಷ್ಕøಷ್ಟವಾಗಿ ಮಾಡಲು ಒಂದು ವಿಶಿಷ್ಟ ಸಾಧನ ಸಹ ಉಂಟು. 

ಆದ್ದರಿಂದ ನಿಷ್ಕøಷ್ಟತೆಯಲ್ಲಿ ಇದರ ಸ್ಥಾನ ಅತಿ ಮೇಲಿನದು. ಪರಮಾಣು ಗಡಿಯಾರವಾದ ಬಳಿಕ ಇದೇ ಎರಡನೆಯದು. ಇದರ ವಿವರಗಳಿಗೆ (ನೋಡಿ- ಕ್ವಾಟ್ರ್ಸ್-ಗಡಿಯಾರ) ಭಿನ್ನ ಮಾದರಿಯ ಗಡಿಯಾರಗಳ ಆಂದೋಳನ ಸಂಖ್ಯೆಗಳನ್ನು ಹೋಲಿಸಿ ಮುಂದೆ ಬರೆದಿದೆ. ಈ ಯಾದಿಯಿಂದ ಕ್ವಾಟ್ರ್ಸ್ ಅಥವಾ ಬೆಣಚುಕಲ್ಲುಗಡಿಯಾರ ಏಕೆ ಉತ್ಕøಷ್ಟವಾದದ್ದು ಎಂದು ತಿಳಿಯುತ್ತದೆ.

ಸಾಧರಣವಾದ ಯಾಂತ್ರಿಕ ಗಡಿಯಾರ	: ಸೆಕೆಂಡಿಗೆ 2.5 ಮತ್ತು 5 ಆಂದೋಲನಗಳು
ನಡುವೆ ಧ್ವನಿ ಅನುನಾದಕ (ಶ್ರುತಿ-ಕವಲು) 
ಇರುವ ಎಲೆಕ್ಟ್ರಾನಿಕ್ ಗಡಿಯಾರ             : ಸೆಕೆಂಡಿಗೆ 300ರಿಂದ 720 ಆಂದೋಲನಗಳು
ಅಂತರದಲ್ಲಿ ನಮ್ಮ ಬೆಣಚುಕಲ್ಲು ಕಂಬಿ ಇರುವ
ಎಲೆಕ್ಟ್ರಾನಿಕ್ ಗಡಿಯಾರ                   : ಸೆಕೆಂಡಿಗೆ 8,192 ಆಂದೋಲನಗಳು
ಕಡಿಮೆ ಒಪ್ಪ ನೀಡಿದ ಬೆಣಚುಕಲ್ಲಿರುವ ಎಲೆಕ್ಟ್ರಾನಿಕ್ 
ಗಡಿಯಾರ                             : ಸೆಕೆಂಡಿಗೆ 2,359,296 ಆಂದೋಲನಗಳು 
ಸೀಸಿಯಂ ಪರಮಾಣು ಗಡಿಯಾರ            : ಸೆಕೆಂಡಿಗೆ 9,192,631,700 ಆಂದೋಲನಗಳು      
	
	ಪರಮಾಣು ಗಡಿಯಾರ : ಇದು ಸಹ ಒಂದು ಎಲೆಕ್ಟ್ರಾನಿಕ್ ಗಡಿಯಾರವೇ. ಇದರ ಆವರ್ತಾಂಕದ ಪೂರೈಕೆ ಮಾಡುವುದು ಅಥವಾ ನಿಯಂತ್ರಣಯುಕ್ತ ಪದಾರ್ಥಗಳ ಪರಮಾಣುಗಳ ಇಲ್ಲವೇ ಅಣುಗಳ ಸಹಜ ಅನುನಾದ ಆವರ್ತಾಂಕಗಳು. ಇಂದು ಬಳಸುವ ಗಡಿಯಾರಗಳಲ್ಲಿ ಈ ಆವರ್ತಾಂಕಗಳು ಸಾಮಾನ್ಯ ಸೂಕ್ಷ್ಮ ತರಂಗಗಳ (ಮೈಕ್ರೋವೇವ್ಸ್) ವ್ಯಾಪ್ತಿಯಲ್ಲಿ ಇವೆ ; ಎಂದರೆ ಸುಮಾರು 1,400 ಒಊZನಿಂದ (ಸೆಕೆಂಡಿಗೆ 1,400,000,000 ಚಕ್ರಗಳು) 24,000 ಒಊZ ವರೆಗೆ ಇವೆ. ಪರಮಾಣು ಗಡಿಯಾರಗಳು ಅತ್ಯಂತ ನಿಷ್ಕøಷ್ಟವಾದವು. ಈಗ ಬಳಕೆಯಲ್ಲಿರುವ ಇಂಥ ಕೆಲವು ಗಡಿಯಾರಗಳ ದೋಷದ ಸಂಭಾವ್ಯತೆ ಎಷ್ಟೆಂದರೆ 30,000 ವರ್ಷಗಳ ದೀರ್ಘಾವಧಿಯಲ್ಲಿ ಅವು 1 ಸೆಕೆಂಡಿನ ಅಲ್ಪಾಂಶವನ್ನು ಕಳೆದುಕೊಳ್ಳಬಹುದು. ಇಲ್ಲವೇ ಗಳಿಸಬಹುದು. ಈಗ ಅಂತರರಾಷ್ಟ್ರೀಯವಾಗಿ ಸ್ವೀಕೃತವಾಗಿರುವ ಕಾಲದ ಏಕಮಾನ ಪರಮಾಣ್ವಕ ಸೆಕೆಂಡ್. ಇದು ಪರಮಾಣು ಗಡಿಯಾರದ ಮೇಲೆ ಆಧರಿತವಾಗಿದೆ. 
(ನೋಡಿ- ಪರಮಾಣು-ಗಡಿಯಾರ)                                         (ಎಂ.ಜೆಎ.;ಎಸ್,ವಿಐಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ